ಪೋಲಾಂಡ್ನ ಕರೊಲಿನಾ ಬಿಲಾವ್ಸ್ಕಾ ಒಲಿದು ಬಂತು 2021ನೇ ವಿಶ್ವ ಸುಂದರಿ ಪಟ್ಟ
Thursday, March 17, 2022
ಪ್ಯೂರ್ಟೋ ರಿಕೊ: ಪೋಲಾಂಡ್ನ ಕರೊಲಿನಾ ಬಿಲಾವ್ಸ್ಕಾ ಅವರಿಗೆ 2021ನೇ ವಿಶ್ವ ಸುಂದರಿ ಪಟ್ಟ ಒಲಿದು ಬಂದಿದೆ. ಮೊದಲ ರನ್ನರ್ ಅಪ್ ಆಗಿ ಭಾರತೀಯ ಮೂಲದ ಅಮೆರಿಕಾ ಪ್ರಜೆ ಶ್ರೀಸೈನಿ ಕಿರೀಟ ಮುಡಿಗೇರಿಸಿದರೆ. ಭಾರತವನ್ನು ಪ್ರತಿನಿಧಿಸಿದ್ದ ಮಾನಸಾ ವಾರಣಾಸಿ ಸಮಿಫೈನಲ್ ಪ್ರವೇಶಿಸಿ ಗಮನ ಸೆಳೆದಿದ್ದಾರೆ. ಮಾನಸಾಗೆ ಟಾಪ್ 13ನೇ ಸ್ಥಾನ ದೊರಕಿದೆ.
ಪ್ಯೂರ್ಟೋ ರಿಕೊದ ಸ್ಯಾನ್ ಜುವಾನ್‌ನಲ್ಲಿರುವ ಕೋಕಾ-ಕೋಲಾ ಮ್ಯೂಸಿಕ್ ಸಭಾಂಗಣದಲ್ಲಿ ಗುರುವಾರ ನಡೆದಿರುವ ಸಮಾರಂಭದಲ್ಲಿ ಕರೊಲಿನಾ ಬಿಲಾವ್ಸ್ಕಾ ವಿಶ್ವಸುಂದರಿ 2021 ಕಿರೀಟ ಮುಡಿಗೇರಿಸಿದ್ದಾರೆ. 2019ನೇ ಸಾಲಿನ ವಿಶ್ವಸುಂದರಿ ಜಮೈಕಾದ ಟೋನಿ ಆನ್ಸಿಂಗ್ ಅವರು ಕರೊಲಿನಾ ಬಿಲಾವ್ಸ್ಕಾಗೆ ವಿಶ್ವಸುಂದರಿ ಕಿರೀಟ ತೊಡಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕರೊಲಿನಾ ಬಿಲಾವ್ಸ್ಕಾ ‘ನನ್ನ ಹೆಸರು ಘೋಷಣೆ ಆಗೀರೋದು ತಿಳಿದು ನನಗೆ ಶಾಕ್ ಆಗಿತ್ತು. ಈಗಲೂ ಅದನ್ನು ನನಗೆ ನಂಬುವುದಕ್ಕೆ ಸಾಧ್ಯವಾಗುತ್ತಿಲ್ಲ. ವಿಶ್ವಸುಂದರಿ ಕಿರೀಟದ ಮೇಲೆ ಅಪಾರ ಗೌರವ ಇದೆ. ಇದನ್ನು ನಾನು ಧರಿಸಿರುವುದಕ್ಕೆ ಬಹಳ ಸಂತೋಷವಿದೆ. ಈ ಕ್ಷಣವನ್ನು ನನ್ನ ಜೀವಮಾನದಲ್ಲಿ ಎಂದಿಗೂ ಮರೆಯಲು ಸಾಧ್ಯವಿಲ್ಲ. ಇದೊಂದು ಅವಿಸ್ಮರಣೀಯ ಕ್ಷಣ ಎಂದು ಭಾವುಕರಾದರು.
ಮ್ಯಾನೇಜ್ಮೆಂಟ್ ವಿಷಯದಲ್ಲಿ ಕರೊಲಿನಾ ಬಿಲಾವ್ಸ್ಕಾ ಸ್ನಾತಕೋತ್ತರ ಪದವಿ ವ್ಯಾಸಂಗ ಮಾಡುತ್ತಿದ್ದಾರೆ. ಅವರ ಸೌಂದರ್ಯದ ಮತ್ತೊಂದು ಮುಖ ಸಮಾಜ ಸೇವೆ. ಕರೊಲಿನಾಗೆ ಸ್ಕ್ಯೂಬಾ ಡ್ರೈವಿಂಗ್, ಸ್ವಿಮ್ಮಿಂಗ್, ಸ್ಫೂರ್ತಿದಾಯಕ ಭಾಷಣ, ಟೆನ್ನಿಸ್ ಮತ್ತು ಬ್ಯಾಡ್ಮಿಂಟನ್ ಆಡುವ ಹವ್ಯಾಸವಿದೆ. ಅಷ್ಟೇ ಅಲ್ಲದೆ, ಸ್ವಯಂಸೇವಕಳಾಗಿ ಸಾಮಾಜಿಕ ಕಾರ್ಯದಲ್ಲೂ ತೊಡಗಿದ್ದಾರೆ. ನಿರಾಶ್ರಿತರಿಗೆ ನೆರವು ನೀಡಿ, ಪ್ರತಿ ರವಿವಾರ ಬಡವರಿಗೆ ಊಟ, ಬಟ್ಟೆ, ಆಹಾರ ಸಾಮಾಗ್ರಿ ವಿತರಣಾ ಕಾರ್ಯ ಮಾಡುವ ಜತೆಗೆ ಕಾನೂನು ಸಲಹೆ, ವೈದ್ಯಕೀಯ ಸೇವೆಯನ್ನೂ ಒದಗಿಸುತ್ತಿದ್ದಾರೆ.