25ರ ಯುವತಿಯನ್ನು ಮದುವೆಯಾಗಿದ್ದ 45ರ ವ್ಯಕ್ತಿ ಆತ್ಮಹತ್ಯೆ!
Wednesday, March 30, 2022
ತುಮಕೂರು: ಕೆಲ ತಿಂಗಳ ಹಿಂದೆ 25ರ ಯುವತಿಯನ್ನು ಮದುವೆಯಾಗಿ ಭಾರೀ ಸುದ್ದಿಯಾಗಿದ್ದ 45 ವರ್ಷದ ವ್ಯಕ್ತಿ ನೇಣಿಗೆ ಶರಣಾದ ಘಟನೆ ಕುಣಿಗಲ್ ತಾಲೂಕಿನ ಹುಲಿಯೂರು ದುರ್ಗ ಹೋಬಳಿಯಲ್ಲಿ ನಡೆದಿದೆ.
ಕುಣಿಗಲ್ ತಾಲೂಕಿನ ಹುಲಿಯೂರು ದುರ್ಗ ಹೋಬಳಿಯ ಅಕ್ಕಿಮರಿಪಾಳ್ಯ ನಿವಾಸಿ ಶಂಕರಪ್ಪ(45) ಮೃತಪಟ್ಟ ವ್ಯಕ್ತಿ.
ಶಂಕರಪ್ಪರ ಮೃತದೇಹ ನಿನ್ನೆ ಬೆಳಗ್ಗೆ ತೋಟದಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದೆ. ಮೃತದೇಹದ ಬಳಿ ಡೆತ್ ನೋಟ್ ಕೂಡಾ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಶಂಕರಪ್ಪರಿಗೆ 45 ವರ್ಷ ವಯಸ್ಸಾದರೂ ವಿವಾಹಗಿರಲಿಲ್ಲ. ಈ ನಡುವೆ ತನ್ನನ್ನು ಮದುವೆಯಾಗುವಂತೆ ಸಂತೆ ಮಾವತ್ತೂರು ಗ್ರಾಮದ ನಿವಾಸಿ ಮೇಘನಾ(25) ಶಂಕರಪ್ಪರಲ್ಲಿ ವಿನಂತಿಸಿದ್ದರು. ಅದರಂತೆ ಶಂಕರಪ್ಪ-ಮೇಘನಾ ವಿವಾಹ ಸುಮಾರು ಐದು ತಿಂಗಳ ಹಿಂದೆ ಸಮೀಪದ ದೇವಾಲಯದಲ್ಲಿ ನಡೆದಿತ್ತು. ಇವರಿಬ್ಬರ ವಯಸ್ಸಿನಲ್ಲಿ 20 ವರ್ಷಗಳ ಅಂತರವಿದ್ದ ಹಿನ್ನೆಲೆಯಲ್ಲಿ ಈ ಮದುವೆ ಭಾರೀ ಮಟ್ಟದಲ್ಲಿ ಸುದ್ದಿಯಾಗಿತ್ತು.
ಇದೀಗ ಶಂಕರಪ್ಪ ಆತ್ಮಹತ್ಯೆ ಮಾಡಿಕೊಂಡಿದ್ದು, ಹುಲಿಯೂರು ದುರ್ಗ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಆತ್ಮಹತ್ಯೆಗೆ ಅತ್ತೆ -ಸೊಸೆಯ ಜಗಳವೇ ಕಾರಣ ಎನ್ನಲಾಗುತ್ತಿದೆ. ಶಂಕರಪ್ಪ ತಾಯಿ ಹಾಗೂ ಮೇಘನಾ ಹೊಂದಾಣಿಕೆಯಿಂದ ಇರುತ್ತಿದ್ದಲ್ಲಿ ಈ ರೀತಿ ಆಗುತ್ತಿರಲಿಲ್ಲ ಎಂದು ಗ್ರಾಮಸ್ಥರು ಮರುಗುತ್ತಿದ್ದಾರೆ.