ಮುತ್ತು ಪೋಣಿಸಿದರೆ ಹಣ ಎಂದ ಅಸಾಮಿಯಿಂದ 500ಕ್ಕೂ ಅಧಿಕ ಮಂದಿಗೆ ವಂಚನೆ!
Wednesday, March 23, 2022
ಬಳ್ಳಾರಿ: ಮುತ್ತು ಪೋಣಿಸಿದರೆ ಹಣ ನೀಡುವೆ ಎಂದ ಅಸಾಮಿಯೋರ್ವನು 500 ಕ್ಕೂ ಅಧಿಕ ಮಂದಿಗೆ ಕೋಟ್ಯಂತರ ರೂ. ಮೋಸ ಮಾಡಿರುವ ಘಟನೆಯೊಂದು ಬಳ್ಳಾರಿಯಲ್ಲಿ ನಡೆದಿದೆ.
ಬಳ್ಳಾರಿಯ ಎಸ್ಪಿ ಸರ್ಕಲ್ ಬಳಿಯಿರುವ, ಆಂಧ್ರಪ್ರದೇಶ ಮೂಲದ ದುಡಂ ರವಿ ಎಂಬಾತನ ಮಾಲಕತ್ವದ 'ಪರ್ಲ್ ವರ್ಲ್ಡ್' ಎಂಬ ಸಂಸ್ಥೆಯಿಂದ ಬಹುಕೋಟಿ ವಂಚನೆ ನಡೆದಿದೆ. ಮೋಸ ಹೋದವರೀಗ ಒಬ್ಬರಾದರೊಬ್ಬರಂತೆ ದೂರು ನೀಡಲು ಪೊಲೀಸ್ ಠಾಣೆಗೆ ಬರುತ್ತಿದ್ದಾರೆ. 2ಸಾವಿರ ರೂ. ಠೇವಣಿ ಇಟ್ಟಲ್ಲಿ ಒಂದು ಮುತ್ತಿನ ಪೊಟ್ಟಣ ಕೊಡುತ್ತಿತ್ತು ಪರ್ಲ್ ವರ್ಲ್ಡ್ ಸಂಸ್ಥೆ. ಆ ಪೊಟ್ಟಣದಲ್ಲಿರುವ ಮುತ್ತನ್ನು ಹತ್ತು ದಿನಗೊಳಗೆ ಪೋಣಿಸಿ ಕೊಟ್ಟರೆ 200 ರೂ. ಕೊಡುವುದಾಗಿ ಹೇಳಿತ್ತು.
ಆದರೆ ಹೆಚ್ಚಿನ ಹಣದ ಆಸೆಗೆ ಹಲವರು 1 ಲಕ್ಷದಿಂದ 10 ಲಕ್ಷ ರೂ.ವರೆಗೂ ಹೂಡಿಕೆ ಮಾಡಿದ್ದಾರೆ. ಈ ಮೂಲಕ ಐನೂರಕ್ಕೂ ಅಧಿಕ ಮಂದಿಯಿಂದ ಸುಮಾರು 5 ಕೋಟಿ ರೂ. ಹಣ ಸಂಗ್ರಹಿಸಲಾಗಿದೆ ಎನ್ನಲಾಗಿದೆ. ಈ ಕುರಿತು ಇನ್ನಷ್ಟೇ ಹೆಚ್ಚಿನ ವಿವರಗಳು ತಿಳಿದು ಬರಬೇಕಿದೆ. ಎರಡು ದಿನಗಳ ಹಿಂದೆ ಸಂಸ್ಥೆಯ ಮೋಸದ ಜಾಲ ಬಯಲಿಗೆ ಬಂದಿದೆ. ಈ ಬಗ್ಗೆ ಬಳ್ಳಾರಿಯ ಗಾಂಧಿನಗರ ಪೊಲೀಸ್ ಠಾಣೆಯಲ್ಲಿ ಕಂಪನಿ ಮಾಲಿಕ ದುಡಂ ರವಿ ವಿರುದ್ಧ ಪ್ರಕರಣ ದಾಖಲಾಗಿದೆ. ಸದ್ಯ ಕಂಪನಿ ಮ್ಯಾನೇಜರ್ ಕುಮಾರ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.