
ನೆರೆಹೊರೆಯ ಮಹಿಳೆಯರ ವೀಡಿಯೋ, ಫೋಟೋ ಚಿತ್ರೀಕರಣ ಮಾಡುತ್ತಿದ್ದ 60ರ ವೃದ್ಧ ಅಂದರ್
Saturday, March 5, 2022
ಬೆಂಗಳೂರು: ನೆರೆಹೊರೆಯ ಮನೆಗಳಲ್ಲಿ ಮಹಿಳೆಯರ ಯುವತಿಯರ ಫೋಟೊ ವೀಡಿಯೋಗಳನ್ನು ಅವರಿಗೆ ತಿಳಿಯದಂತೆ ಚಿತ್ರೀಕರಣ ಮಾಡುತ್ತಿದ್ದ 60 ವರ್ಷದ ವೃದ್ಧನನ್ನು ಪೀಣ್ಯ ಪೊಲೀಸರು ಬಂಧಿಸಿದ್ದಾರೆ.
ಪೀಣ್ಯ ನಿವಾಸಿ ನಾರಾಯಣಗೌಡ ಬಂಧಿತ ಆರೋಪಿ.
ನಾರಾಯಣ ಗೌಡ ಪೀಣ್ಯದಲ್ಲಿ ಪತ್ನಿಯೊಂದಿಗೆ ವಾಸವಿದ್ದ. ಈತ ಬಟ್ಟೆ ಒಗೆಯುವ, ಪಾತ್ರೆ ತೊಳೆಯುವ ಅಕ್ಕಪಕ್ಕದ ಮಹಿಳೆಯರ ಫೋಟೋ, ವೀಡಿಯೋಗಳನ್ನು ಅವರಿಗೆ ತಿಳಿಯದಂತೆ ಚಿತ್ರೀಕರಿಸುತ್ತಿದ್ದ. ಇತ್ತೀಚಿಗೆ ಇದೇ ರೀತಿಯ ಕೃತ್ಯದಲ್ಲಿ ಆತ ತೊಡಗಿದ್ದಾಗ ಪಕ್ಕದ ಮನೆಯ ಮಹಿಳೆಯೊಬ್ಬರು ಇದನ್ನು ಗಮನಿಸಿದ್ದಾರೆ. ಇದನ್ನು ಆಕೆ ಪ್ರಶ್ನಿಸಿದಾಗ ಮೊಬೈಲ್ ಅನ್ನು ಸ್ಥಳದಲ್ಲಿಯೇ ಬಿಟ್ಟು ಪರಾರಿಯಾಗಿದ್ದ.
ಆ ಬಳಿಕ ಆರೋಪಿಯ ಮೊಬೈಲ್ ಪರಿಶೀಲನೆ ನಡೆಸಿದಾಗ ಅಕ್ಕಪಕ್ಕದ ಮನೆಯ ಬಹುತೇಕ ಎಲ್ಲಾ ಮಹಿಳೆಯರ, ಯುವತಿಯರ ನೂರಕ್ಕೂ ಅಧಿಕ ಫೋಟೋ, ವೀಡಿಯೋಗಳು ಪತ್ತೆಯಾಗಿದೆ. ಈ ಹಿನ್ನೆಲೆಯಲ್ಲಿ ಈ ವೃದ್ಧನ ಮೇಲೆ ಪೀಣ್ಯ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿತ್ತು. ಈ ದೂರಿನನ್ವಯ ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನ ವಿಧಿಸಿದ್ದಾರೆ.