
ದಾಂಡೇಲಿ: ಸೈಕಲ್ ಅಪಘಾತದಲ್ಲಿ ಛತ್ತೀಸಗಢದ ಯುವ ವೈದ್ಯೆ ದುರಂತ ಸಾವು
Friday, March 4, 2022
ದಾಂಡೇಲಿ(ಕಾರವಾರ): ಸೈಕ್ಲಿಂಗ್ ಮಾಡುತ್ತಿದ್ದ ಸಂದರ್ಭದಲ್ಲಿ ಅಪಘಾತ ಸಂಭವಿಸಿ ಯುವವೈದ್ಯೆಯೋರ್ವರು ದುರಂತವಾಗಿ ಮೃತಪಟ್ಟ ಘಟನೆಯೊಂದು ಕಾರವಾರ ಜಿಲ್ಲೆಯ ದಾಂಡೇಲಿ ಸಮೀಪದ ಬೀರಂಪಾಲಿ ಬಳಿ ನಡೆದಿದೆ.
ಛತ್ತೀಸ್‌ಗಢ ಮೂಲದ ದೇವಿಕಾ ಸಂಜಯ್ ವಾಸವಣೆ (25) ಮೃತಪಟ್ಟ ಯುವವೈದ್ಯೆ.
ಪ್ರವಾಸಕ್ಕೆ ಬಂದಿದ್ದ ಛತ್ತೀಸ್‌ಗಡ ಮೂಲದ ದೇವಿಕಾ ಸಂಜಯ್ ವಾಸವಣೆ ಸೈಕ್ಲಿಂಗ್ ಮಾಡುತ್ತಿದ್ದ ಸಂದರ್ಭ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದಿದ್ದರು. ಪರಿಣಾಮ ಗಂಭೀರ ಗಾಯಗೊಂಡ ಇವರು ಮೃತಪಟ್ಟಿದ್ದಾರೆ.
ವೈದ್ಯಕೀಯ ವಿದ್ಯಾರ್ಥಿನಿಯಾಗಿದ್ದ ದೇವಿಕಾ ಸಂಜಯ್ ವಾಸವಣೆ ಧಾರವಾಡಕ್ಕೆ ಸೆಮಿನಾರ್ಗೆಂದು ಬಂದಿದ್ದರು. ರಜಾ ಹಿನ್ನೆಲೆಯಲ್ಲಿ ಧಾರವಾಡದಿಂದ ದಾಂಡೇಲಿಗೆ ಪ್ರವಾಸಕ್ಕೆ ಆಗಮಿಸಿದ್ದರು. ದಾಂಡೇಲಿಯಲ್ಲಿ ಹಿಡನ್ ವ್ಯಾಲಿ ಹೋಮ್ ಸ್ಟೇನಲ್ಲಿ ಸ್ನೇಹಿತರೊಂದಿಗೆ ಅವರು ತಂಗಿದ್ದರು. ಈ ವೇಳೆ ಸೈಕ್ಲಿಂಗ್ ಮಾಡುತ್ತಿದ್ದಾಗ ಆಯತಪ್ಪಿ ಮರಕ್ಕೆ ಡಿಕ್ಕಿ ಹೊಡೆದು ಮೃತಪಟ್ಟಿದ್ದಾರೆ. ಘಟನೆಯಲ್ಲಿ ಅವರ ತಲೆಗೆ ತೀವ್ರ ಸ್ವರೂಪದ ಗಾಯವಾಗಿದ್ದು ಮೂಗಿನಿಂದ ರಕ್ತಸ್ರಾವವಾಗಿತ್ತು. ಪರಿಣಾಮ, ದೇವಿಕಾ ಸಂಜಯ್ ವಾಸವಣೆ ಸ್ಥಳದಲ್ಲಿಯೇ ಕೊನೆಯುಸಿರೆಳೆದಿದ್ದಾರೆ. ದಾಂಡೇಲಿ ಸರಕಾರಿ ಆಸ್ಪತ್ರೆಯಲ್ಲಿ ಯುವತಿಯ ಮೃತದೇಹದ ಮರಣೋತ್ತರ ಪರೀಕ್ಷೆ ನಡೆದಿದೆ. ದಾಂಡೇಲಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.