ಪೂಜಾ ಸಾಮಾಗ್ರಿ ತರಲೆಂದು ಹೊರಟ್ಟಿದ್ದ ಅಪ್ಪ - ಮಗ ರಸ್ತೆ ಅಪಘಾತಕ್ಕೆ ಬಲಿ
Tuesday, March 15, 2022
ದೊಡ್ಡಬಳ್ಳಾಪುರ: ಮನೆಯಲ್ಲಿ ನಡೆಯಬೇಕಿದ್ದ ಮುನೇಶ್ವರಸ್ವಾಮಿಯ ಪೂಜೆಗಾಗಿ ಪೂಜಾ ಸಾಮಗ್ರಿಗಳನ್ನು ತರಲೆಂದು ಬೈಕ್ನಲ್ಲಿ ಸಂಚರಿಸುತ್ತಿದ್ದ ತಂದೆ ಹಾಗೂ ಪುತ್ರ ಅಪಘಾತದಲ್ಲಿ ದುರ್ಮರಣಕ್ಕೀಡಾಗಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ಶಿವಪುರ ಗ್ರಾಮದ ಬಳಿ ನಡೆದಿದೆ.
ಸೊಣ್ಣಪ್ಪನಹಳ್ಳಿಯ ನಿವಾಸಿಗಳಾದ ಮೀಸೆ ರಾಮಯ್ಯ (64), ನಾರಾಯಣ್ (40) ಮೃತಪಟ್ಟವರು ಎಂದು ತಿಳಿದುಬಂದಿದೆ.
ಇವರ ಮನೆಯಲ್ಲಿ ಮುನೇಶ್ವರಸ್ವಾಮಿ ಪೂಜೆ ಆಯೋಜನೆ ಮಾಡಲಾಗಿತ್ತು. ಆದ್ದರಿಂದ ಇಂದು ಬೆಳಗ್ಗೆ ತಂದೆ ಹಾ ಪುತ್ರ ಪೂಜಾ ಸಾಮಗ್ರಿಗಳನ್ನು ತರಲೆಂದು ಸ್ಕೂಟರ್ನಲ್ಲಿ ದೊಡ್ಡಬಳ್ಳಾಪುರ ನಗರಕ್ಕೆ ಹೊರಟ್ಟಿದ್ದರು. ಆದರೆ ಮಾರ್ಗ ಮಧ್ಯ ನಿಯಂತ್ರಣ ತಪ್ಪಿದ ಸ್ಕೂಟರ್ ಮರಕ್ಕೆ ಢಿಕ್ಕಿ ಹೊಡೆದು ಈ ದುರಂತ ಸಂಭವಿಸಿದೆ ಎನ್ನಲಾಗಿದೆ.
ಮತ್ತೊಂದೆಡೆ ಅಪರಿಚಿತ ವಾಹನವೊಂದು ಇವರು ಸಂಚರಿಸುತ್ತಿದ್ದ ಸ್ಕೂಟರ್ಗೆ ಡಿಕ್ಕಿ ಹೊಡೆದ ಪರಿಣಾಮ ಅಪ್ಪ - ಮಗ ಮೃತಪಟ್ಟಿರಬಹುದೆಂಬ ಶಂಕೆ ವ್ಯಕ್ತವಾಗಿದೆ. ಈ ಬಗ್ಗೆ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.