
ಬಂಟ್ವಾಳ: ಮಸೀದಿಯೊಳಗೆ ಚೂರಿಯೊಂದಿಗೆ ಅಕ್ರಮ ಪ್ರವೇಶ ಮಾಡಿರುವ ದುಷ್ಕರ್ಮಿಯ ಬಂಧನ
Wednesday, March 2, 2022
ಮಂಗಳೂರು: ಮುಸ್ಲಿಂ ಧರ್ಮಗುರುಗಳಿಗೆ ಚೂರಿಯಿಂದ ಇರಿಯುತ್ತೇನೆಂದು ಮಸೀದಿಯೊಳಗೆ ಅಕ್ರಮ ಪ್ರವೇಶ ಮಾಡಿರುವ ಆರೋಪಿಯನ್ನು ಬಂಧಿಸಿರುವ ಪೊಲೀಸರು ಚೂರಿ ಸಹಿತ ಆರೋಪಿಯನ್ನು ಬಂಧಿಸಿದ್ದಾರೆ.
ಬಾಬು ಪೂಜಾರಿ(60) ಬಂಧಿತ ಆರೋಪಿ.
ಆರೋಪಿ ಬಾಬು ಪೂಜಾರಿ ಮಾರ್ಚ್ 1ರಂದು ರಾತ್ರಿ 10.05ರ ವೇಳೆಗೆ ಬಿ ಮೂಡ ಗ್ರಾಮದ ಮುಹಿಯುದ್ದೀನ್ ಕೇಂದ್ರ ಜುಮ್ಮಾ ಮಸೀದಿ ಮಿತ್ತಬೈಲ್ ವಠಾರಕ್ಕೆ ಅಕ್ರಮ ಪ್ರವೇಶ ಮಾಡಿದ್ದಾನೆ. ಆತ ಅಲ್ಲಿದ್ದವರನ್ನು ಧರ್ಮಗುರು ಎಲ್ಲಿ ಎಂದು ವಿಚಾರಿಸಿದ್ದಾನೆ. ಅವರು 'ಯಾಕೆ?' ಎಂದು ಕೇಳಿದಾಗ, ತಾನು ಅವರನ್ನು ಹತ್ಯೆ ಮಾಡಲು ಬಂದಿರುವೆ ಎಂದು ಹೇಳಿದ್ದಾನೆ.
ಆಗ ಸ್ಥಳೀಯರು ಆತನನ್ನು ಹಿಡಿದು ಪರಿಶೀಲನೆ ನಡೆಸಿದಾಗ ಆತನ ಸ್ಕೂಟರ್ ನಲ್ಲಿ ಮಾರಕಾಯುಧವೊಂದು ದೊರಕಿದೆ. ತಕ್ಷಣ ಆತನನ್ನು ಪೊಲೀಸರಿಗೊಪ್ಪಿಸಲಾಗಿದೆ. ಈಬಗ್ಗೆ ಬಂಟ್ವಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.