ಅಕ್ರಮ ಸಂಬಂಧಕ್ಕೆ ಒಪ್ಪಿಗೆ ನೀಡದ ಮಹಿಳೆಯ ಕೊಚ್ಚಿ ಕೊಂದ ಕಾಮುಕ ಅರೆಸ್ಟ್
Sunday, March 20, 2022
ಹಾಸನ: ಅಕ್ರಮ ಸಂಬಂಧಕ್ಕೆ ಒಪ್ಪಿಗೆ ನೀಡಿಲ್ಲವೆಂದು ಮಹಿಳೆಯೋರ್ವರನ್ನು ಅತ್ಯಾಚಾರಕ್ಕೆ ಯತ್ನಿಸಿ ಕೊಲೆಗೈದಿರುವ ಆರೋಪಿಯನ್ನು ಹಾಸನದ ದೊಡ್ಡಪುರ ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ.
ದೊಡ್ಡಪುರ ಗ್ರಾಮದ ಲತೇಶ್ (35) ಎಂಬಾತ ಅತ್ಯಾಚಾರಕ್ಕೆ ಯತ್ನಿಸಿ ಕೊಲೆಗೈದ ಆರೋಪಿ. ತನ್ನೊಂದಿಗೆ ಅಕ್ರಮ ಸಂಬಂಧವನ್ನು ಬೆಳೆಸಲು ಒಪ್ಪದಿರುವುದಕ್ಕೆ ಮಾ.16ರಂದು ಗ್ರಾಮದ ಮಹಿಳೆಯನ್ನು ಆರೋಪಿ ಲತೇಶ್ ಕೊಚ್ಚಿ ಕೊಲೆಗೈದಿದ್ದಾನೆ.
ಅವಿವಾಹಿತನಾಗಿದ್ದ ಲತೇಶ್ ಆ ಮಹಿಳೆಯನ್ನು ಮದುವೆ ಮಾಡಿಕೊಳ್ಳುವಂತೆ ಪೀಡಿಸುತ್ತಿದ್ದ. ಇದನ್ನು ನಿರಾಕರಿಸಿದ ಆಕೆಯನ್ನು ಹತ್ಯೆ ಮಾಡಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಪೊಲೀಸರು ತನಿಖೆ ನಡೆಸಿದ ಸಂದರ್ಭ ಪೊಲೀಸ್ ಶ್ವಾನಗಳು ಗ್ರಾಮದೊಳಗೆ ಹೋಗಿದ್ದರಿಂದ ಲತೇಶ್ನನ್ನು ಅನುಮಾನದ ಮೇಲೆ ವಶಕ್ಕೆ ಪಡೆದು ವಿಚಾರಣೆ ಮಾಡಲಾಗಿತ್ತು. ಈ ವೇಳೆ ಕೊಲೆ ಕೃತ್ಯ ಬಯಲಾಗಿದೆ. ಆಕೆಯ ಮನೆಯಲ್ಲಿ ಯಾರೂ ಇಲ್ಲದ ವೇಳೆ ಮನೆಗೆ ಹೋಗಿ ತಾನೇ ಕೊಲೆಗೈದಿರುವುದಾಗಿ ಆರೋಪಿ ಲತೇಶ್ ಒಪ್ಪಿದ್ದಾನೆ.
ಈ ಬಗ್ಗೆ ಹಾಸನ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದೆ. ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ. ಸದ್ಯ ಜೈಲು ಕಂಬಿ ಎಣಿಸುತ್ತಿರುವ ಲತೇಶ್ 10 ವರ್ಷಗಳ ಹಿಂದೆ ಬಾಲಕಿಯ ಮೇಲೆ ಅತ್ಯಾಚಾರವೆಸಗಿರುವ ಆರೋಪದಲ್ಲಿ ಜೈಲು ಸೇರಿದ್ದ. ಈ ಪ್ರಕರಣದಲ್ಲಿ 4 ವರ್ಷಗಳ ಕಾಲ ಜೈಲು ವಾಸದ ಬಳಿಕ ಕೇಸ್ ಖುಲಾಸೆಯಾಗಿ ಬಿಡುಗಡೆಯಾಗಿದ್ದ. ಬಳಿಕವೂ ಬದಲಾಗದ ಲತೇಶ್ ಇದೀಗ ಪರಿಚಿತ ಮಹಿಳೆಯ ಮೇಲೆಯೇ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ. ಆಕೆ ಸಹಕರಿಸದಿದ್ದಾಗ ಹತ್ಯೆ ಮಾಡಿದ್ದಾನೆ.