ಮುಲ್ಕಿ: ಕಲ್ಲಿನಿಂದ ಜಜ್ಜಿ ವ್ಯಕ್ತಿಯ ಕೊಲೆಗೈದ ಆರೋಪಿ ಅರೆಸ್ಟ್
Monday, March 21, 2022
ಮಂಗಳೂರು: ನಗರದ ಮುಲ್ಕಿ ಪೊಲೀಸ್ ಠಾಣೆಯ ಬಪ್ಪನಾಡು ಗ್ರಾಮದ ಮುಲ್ಕಿ ಪೇಟೆಯ ಪೆಟ್ರೋಲ್ ಬಂಕ್ ಬಳಿ ನಡೆದ ಕಲ್ಲಿನಿಂದ ಜಜ್ಜಿ ವ್ಯಕ್ತಿಯೋರ್ವರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊಲೆ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ತಮಿಳುನಾಡು ರಾಜ್ಯದ ಕನ್ಯಾಕುಮಾರಿ ಜಿಲ್ಲೆ ಮೂಲದ ಸದ್ಯ ಮಂಗಳೂರಿನ ಬೆಳ್ಳಾಯೂರು ನಿವಾಸಿ ಎಂ. ಮುರುಗನ್(36) ಬಂಧಿತ ಆರೋಪಿ.
ಮಾರ್ಚ್ 19ರ ರಾತ್ರಿ ವೇಳೆ ಮೆನ್ನಬೆಟ್ಟು ಗ್ರಾಮದ ಉಲ್ಲಂಜೆ ವಾಸಿ ಹರೀಶ್ ಸಾಲ್ಯಾನ್ (37 ವರ್ಷ) ಎಂಬವರನ್ನು ಮುಖಕ್ಕೆ ಕಲ್ಲು ಜಜ್ಜಿ ಕೊಲೆ ಮಾಡಿದ್ದರು. ಈ ಬಗ್ಗೆ ಮುಲ್ಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪೊಲೀಸರು ಪ್ರಕರಣದ ತನಿಖೆ ನಡೆಸಿದ ಸಂದರ್ಭ ಹಣಕಾಸಿನ ವಿಚಾರಕ್ಕೆ ಈ ಕೊಲೆ ನಡೆದಿತ್ತು ಎಂದು ತಿಳಿದು ಬಂದಿದೆ.
ಆರೋಪಿ ಮುರಗನ್ ಬಗ್ಗೆ ಅನುಮಾನಗೊಂಡು ಪೊಲೀಸರು ಮಾರ್ಚ್ 21ರಂದು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಆಗ ಆತ ತಾನೇ ಕೊಲೆ ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆ. ಹಣಕಾಸಿನ ವ್ಯವಹಾರದ ದ್ವೇಷದಿಂದ ಕಲ್ಲಿನಿಂದ ತಲೆಗೆ ಜಜ್ಜಿ ಹರೀಶ್ ಸಾಲ್ಯಾನ್ ನನ್ನು ಕೊಲೆ ಮಾಡಿರುವುದಾಗಿ ಹೇಳಿದ್ದಾನೆ. ಆರೋಪಿಯನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದೆ.