ಮಂಗಳೂರು: ಪೊಲೀಸ್ ಸಿಬ್ಬಂದಿಗೆ ಚೂರಿ ಇರಿದು ಪರಾರಿಯಾದ ಪ್ರಕರಣದ ಖದೀಮ ಪತ್ತೆ!
Thursday, March 24, 2022
ಮಂಗಳೂರು: ದುಬಾರಿ ವಾಚ್ ಮಾರಾಟಕ್ಕೆ ಯತ್ನಿಸುತ್ತಿದ್ದ ಬಗ್ಗೆ ವಿಚಾರಣೆಗೆ ಬಂದಿದ್ದ ಪೊಲೀಸ್ ಸಿಬ್ಬಂದಿಗೆ ಚೂರಿ ಇರಿದು ಪರಾರಿಯಾಗಿದ್ದ ದುಷ್ಕರ್ಮಿಯೋರ್ವನನ್ನು ಕೊಣಾಜೆ ಠಾಣಾ ಪೊಲೀಸರು ಪತ್ತೆ ಹಚ್ಚಿದ್ದಾರೆ.
ನಾಸಿರ್ ಬಂಧಿತ ಆರೋಪಿ.
ಆರೋಪಿ ನಾಸಿರ್ ಮತ್ತು ಸಿದ್ದೀಕ್ ಫೆ.21ರಂದು ವಾಚ್ ಅಂಗಡಿಯೊಂದಕ್ಕೆ ಬಂದು ದುಬಾರಿ ವಾಚ್ ಮಾರಾಟಕ್ಕೆ ಯತ್ನಿಸಿದ್ದಾರೆ. ಈ ಬಗ್ಗೆ ಅನುಮಾನಗೊಂಡ ಅಂಗಡಿಯವರು ಉತ್ತರ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಪೊಲೀಸ್ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಆರೋಪಿಗಳನ್ನು ವಿಚಾರಣೆ ಮಾಡಿದ್ದಾರೆ. ಆಗ ಆರೋಪಿ ಪೊಲೀಸ್ ಸಿಬ್ಬಂದಿಗೆ ಮಾರಕಾಯುಧದಿಂದ ಚುಚ್ಚಿ ಪರಾರಿಯಾಗಿದ್ದಾನೆ.
ಘಟನೆಯ ಬಗ್ಗೆ ಬಂದರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿ ಆರೋಪಿಯ ಪತ್ತೆಗೆ ಪೊಲೀಸರು ಬಲೆ ಬೀಸಿದ್ದರು. ಇದೀಗ ಇಂದು ಬೆಳಗ್ಗೆ ಆರೋಪಿಗಳಲ್ಲೋರ್ವ ನಾಸಿರ್ ಎಂಬಾತ ಪಜೀರು ಗ್ರಾಮದ ಅರ್ಕಾನ ಎಂಬಲ್ಲಿ ಇದ್ದಾನೆಂಬ ಖಚಿತ ಮಾಹಿತಿ ದೊರೆತ ಹಿನ್ನೆಲೆಯಲ್ಲಿ ಕೊಣಾಜೆ ಪೊಲೀಸರು ಬಂಧಿಸಿದ್ದಾರೆ. ಈ ಬಗ್ಗೆ ಕೊಣಾಜೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮತ್ತೋರ್ವ ಆರೋಪಿಯ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.