ಕಬಕ ಶಾಲೆಯ ಬೀಗ ಮುರಿದು ಲ್ಯಾಪ್‌ಟಾಪ್ ಕಳವುಗೈದ ಆರೋಪಿ ಪೊಲೀಸ್ ವಶಕ್ಕೆ
Sunday, March 20, 2022
ಮಂಗಳೂರು: ಪುತ್ತೂರು ತಾಲೂಕಿನ ಕಬಕ ದ.ಕ.ಜಿ.ಪಂ.ಹಿ.ಪ್ರಾ. ಶಾಲಾ ಕಚೇರಿಯ ಕೊಠಡಿಯ ಬೀಗ ಮುರಿದು ಲ್ಯಾಪ್ ಟಾಪ್ ಕಳವುಗೈದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಮಂಗಳೂರಿನ ಮಂಜನಾಡಿ ಗ್ರಾಮದ ಕಲ್ಕಟ್ಟ ಬದ್ರಿಯಾನಗರ ನಿವಾಸಿ ಮೊಹಮ್ಮದ್ ಅಬ್ದುಲ್ ಫಯಾನ್(22) ಬಂಧಿತ ಆರೋಪಿ.
ಆರೋಪಿ ಮೊಹಮ್ಮದ್ ಅಬ್ದುಲ್ ಫಯಾನ್ ತನ್ನ ಸಹಚರ ಸುಹೇಬ್ ಎಂಬಾತನೊಂದಿಗೆ ಸೇರಿಕೊಂಡು 2020 ಫೆ.12ರಂದು ರಾತ್ರಿ ವೇಳೆ ಪುತ್ತೂರು ತಾಲೂಕಿನ ಕಬಕ ದ.ಕ.ಜಿ.ಪಂ.ಹಿ.ಪ್ರಾ. ಶಾಲಾ ಕಚೇರಿಯ ಕೊಠಡಿಯ ಬೀಗ ಮುರಿದಿದ್ದ. ಬಳಿಕ ಅಲ್ಲಿದ್ದ ನಾಲ್ಕು ಕಪಾಟುಗಳನ್ನು ಜಾಲಾಡಿ ಕಡತ, ದಾಖಲೆಗಳನ್ನು ಚಲ್ಲಾಪಿಲ್ಲಿ ಮಾಡಿದ್ದ. ಬಳಿಕ ಅಲ್ಲಿದ್ದ 24,990 ರೂ. ಮೌಲ್ಯದ ಲ್ಯಾಪ್ ಟಾಪ್ ಕಳವುಗೈದಿದ್ದ. ಮರುದಿನ ಬೆಳಗ್ಗೆ ಶಾಲೆಗೆ ಸಿಬ್ಬಂದಿ ಬಂದಾಗ ವಿಚಾರ ತಿಳಿದು ಶಾಲಾ ಮುಖ್ಯ ಶಿಕ್ಷಕಿ ಈ ಬಗ್ಗೆ ಪೊಲೀಸ್ ದೂರು ನೀಡಿದ್ದರು.
ಮತ್ತೊಂದು ಪ್ರಕರಣಕ್ಕೆ ಸಂಬಂಧಿಸಿದಂತೆ ಆತ ಬೆಳಗಾವಿ ಜೈಲಿನಲ್ಲಿದ್ದನು. ಇದೀಗ ಆತ ತಾನು ಶಾಲೆಯ ಬೀಗ ಮುರಿದು ಲ್ಯಾಪ್ ಟಾಪ್ ಕದ್ದಿರುವುದಾಗಿ ತನಿಖೆಯ ವೇಳೆ ತಪ್ಪೊಪ್ಪಿಕೊಂಡಿದ್ದಾನೆ. ಈ ಹಿನ್ನೆಲೆಯಲ್ಲಿ ನ್ಯಾಯಾಲಯದ ಅನುಮತಿ ಮೇರೆಗೆ 2022ರ ಮಾರ್ಚ್ 18ರಂದು ಬೆಳಗಾವಿ ಕಾರಾಗೃಹದಿಂದ ಪುತ್ತೂರು ನಗರ ಠಾಣಾ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇದೀಗ ಆತ ಹೇಳಿದಂತೆ ಮಂಗಳೂರಿನ ಅಂಗಡಿಗೆ ತೆರಳಿ ಪೊಲೀಸರು ಲ್ಯಾಪ್ ಟಾಪ್ ಅನ್ನು ವಶಪಡಿಸಿಕೊಂಡು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.