
ಸಣ್ಣ ವಯಸ್ಸಿನ ಹುಡುಗಿಯರೊಂದಿಗೆ ಚಕ್ಕಂದವಾಡಲು ಕಳವು ಕೃತ್ಯಕ್ಕೆ ಇಳಿದಿದ್ದ ವೃದ್ಧ ಅಂದರ್!
Tuesday, March 8, 2022
ಬೆಂಗಳೂರು: ಸಣ್ಣ ವಯಸ್ಸಿನ ಯುವತಿಯರೊಂದಿಗೆ ಕಾಮತೃಷೆ ತೀರಿಸಿಕೊಳ್ಳಲು ಕಳ್ಳತನಕ್ಕೆ ಇಳಿದಿರುವ ವೃದ್ಧನೀಗ ಪೊಲೀಸ್ ಅತಿಥಿಯಾಗಿದ್ದಾನೆ.
ಚಿಕ್ಕಮಗಳೂರು ಮೂಲದ ವೃದ್ಧ ರಮೇಶ್ (70) ಬಂಧಿತ ಆರೋಪಿ.
ಇದೀಗ ಈತ ಬೆಂಗಳೂರು ಪೊಲೀಸರ ಅತಿಥಿಯಾಗಿದ್ದಾನೆ. ಸಣ್ಣ ವಯಸ್ಸಿನ ಯುವತಿಯರೊಂದಿಗೆ, ಮಹಿಳೆಯರೊಂದಿಗೆ ಚಕ್ಕಂದ ಆಡುವುದಕ್ಕೆಂದು ಈ ವೃದ್ಧ ಕಳ್ಳತನಕ್ಕಿಳಿದಿದ್ದ. ಕಳವು ಕೃತ್ಯದಿಂದ ಬಂದ ಹಣದಿಂದ ಹುಡುಗಿಯರೊಂದಿಗೆ ಮಜಾ ಮಾಡುತ್ತಿದ್ದ. ಇದೀಗ ಈತ ಪೊಲೀಸ್ ಅತಿಥಿಯಾಗಿದ್ದಾನೆ. ಇವನಿಂದ ಸುಮಾರು 8 ಲಕ್ಷ ರೂ. ಮೌಲ್ಯದ 162 ಗ್ರಾಂ ತೂಕದ ಚಿನ್ನಾಭರಣ, 5 ಸಾವಿರ ರೂ. ನಗದು ವಶಪಡಿಸಿಕೊಳ್ಳಲಾಗಿದೆ.
ಬೆಂಗಳೂರಿನಲ್ಲಿ ಮನೆಯೊಂದರ ಬೀಗ ಮುರಿದು ಚಿನ್ನಾಭರಣ ಹಾಗೂ ನಗದು ಕಳವು ಮಾಡಲಾಗಿತ್ತು. ಮನೆಯ ಮಾಲಕರು ನೀಡಿರುವ ದೂರಿನನ್ವಯ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ. ಈ ಸಂದರ್ಭ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲನೆ ನಡೆಸಿದಾಗ ಈ ಖದೀಮ ಸಿಕ್ಕಿಬಿದ್ದಿದ್ದಾನೆ. ಎರಡು ಮದುವೆಯಾಗಿರುವ ಈತ ಮೂವರು ಮಕ್ಕಳ ತಂದೆಯಾಗಿದ್ದಾನೆ. ಇದೀಗ ಈತ ಮೂರನೆಯ ಮದುವೆಗೆ ಯತ್ನಿಸುತ್ತಿದ್ದ ಎಂಬ ವಿಚಾರವನ್ನು ಪೊಲೀಸರು ಬಹಿರಂಗಪಡಿಸಿದ್ದಾರೆ.
ಈತ ಕಳವುಗೈದಿರುವ ಹಣ, ಚಿನ್ನಾಭರಣಗಳನ್ನು ಸಣ್ಣ ವಯಸ್ಸಿನ ಹುಡುಗಿಯರಿಗೆ ಆಮಿಷವೊಡ್ಡಿ ಅವರಿಂದ ಕಾಮತೃಷೆ ತೀರಿಸಿಕೊಳ್ಳುತ್ತಿದ್ದ. 12 ವರ್ಷಗಳ ಹಿಂದೆ ಮನೆ ತೊರೆದು ಇಬ್ಬರು ಪತ್ನಿಯರು ಹಾಗೂ ಮಕ್ಕಳನ್ನು ಬಿಟ್ಟಿದ್ದ ಈತ ಕಳವು ಕೃತ್ಯಕ್ಕೆ ಇಳಿದಿದ್ದ. ವೇಶ್ಯಾಗೃಹಕ್ಕೆ ಹೋಗಿ ಇಲ್ಲವೇ ಎಳೆಯ ವಯಸ್ಸಿನ ಹುಡುಗಿಯರನ್ನೇ ಟಾರ್ಗೆಟ್ ಮಾಡಿಕೊಂಡು ಚಪಲ ತೀರಿಸಿಕೊಳ್ಳುತ್ತಿದ್ದ. ಸದ್ಯ ಈತನ ಮೊಬೈಲ್ ಸಂಪರ್ಕದಲ್ಲಿದ್ದ ಕೆಲವು ಮಹಿಳೆಯರನ್ನು ಪತ್ತೆ ಹಚ್ಚಲಾಗಿದೆ. ಮೊಬೈಲ್ನಿಂದಲೇ ಈತನ ಕೆಲವು ಕಾಮ ಕೃತ್ಯಗಳೂ ಬಯಲಾಗಿವೆ.