
ರಾಜ್ಯ ರಾಜಧಾನಿಯಲ್ಲಿ ಫೈರಿಂಗ್: ಪೊಲೀಸ್ ಮೇಲೆ ಹಲ್ಲೆಗೆ ಮುಂದಾದ ಕೊಲೆ ಆರೋಪಿಗಳ ಕಾಲಿಗೆ ಗುಂಡಿಕ್ಕಿ ಅರೆಸ್ಟ್
Wednesday, March 9, 2022
ಬೆಂಗಳೂರು: ಹುಡುಗಿಯೊಬ್ಬಳ ವಿಚಾರವಾಗಿ ಇಬ್ಬರ ನಡುವೆ ಮಂಗಳವಾರ ತಡರಾತ್ರಿ ನಡೆದ ಜಗಳವೊಂದು ಓರ್ವನ ಕೊಲೆಯ ಮೂಲಕ ಅಂತ್ಯಗೊಂಡಿದೆ. ಪೊಲೀಸರು ಹಂತಕರನ್ನು ಬಂಧಿಸಲು ಹೋದ ಸಂದರ್ಭ ಆರೋಪಿಗಳು ಅವರ ಮೇಲೆಯೇ ಹಲ್ಲೆಗೆ ಮುಂದಾಗಿದ್ದರು. ಈ ವೇಳೆ ಫೈರಿಂಗ್ ನಲ್ಲಿ ಇಬ್ಬರು ಆರೋಪಿಗಳ ಕಾಲಿಗೆ ಪೊಲೀಸರು ಗುಂಡು ಹಾರಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪುಲಕೇಶಿನಗರ ಪೊಲೀಸರು ಐವರು ಆರೋಪಿಗಳನ್ನು ಬಂಧಿಸಿದ್ದಾರೆ.
ಕೆ.ಜಿ.ಹಳ್ಳಿ ನಿವಾಸಿ ಮೊಹಮ್ಮದ್ ಉಸ್ಮಾನ್ ಹತ್ಯೆಯಾದ ದುರ್ದೈವಿ. ಸೈಯದ್ ಮೊಹೀನ್ ಹಾಗೂ, ಅದ್ನಾನ್ ಖಾನ್ ಗುಂಡೇಟು ಬಿದ್ದವರು. ಅರ್ಬಾಜ್, ಮಜರ್, ಸೈಯದ್ ಸಾಕಿಬ್ ಬಂಧಿತ ಆರೋಪಿಗಳು.
ಪ್ರಕರಣದ ವಿವರ: ಕೆ.ಜಿ.ಹಳ್ಳಿ ನಿವಾಸಿ ಮೊಹಮ್ಮದ್ ಉಸ್ಮಾನ್ ಹಾಗೂ ಮೊಹಿನ್ ನಡುವೆ ಹುಡುಗಿಯೊಬ್ಬಳ ವಿಚಾರಕ್ಕಾಗಿ ಜಗಳವಾಗಿದೆ. ಈ ವೇಳೆ ಮೊಹಿನ್ ಶಿವಾಜಿನಗರದಿಂದ ಹುಡುಗರನ್ನು ಕರೆಯಿಸಿಕೊಂಡು ಮೊಹಮ್ಮದ್ ಉಸ್ಮಾನ್ ನನ್ನು ಹತ್ಯೆ ಮಾಡಿಸಿ ಪರಾರಿಯಾಗಿದ್ದಾನೆ ಎನ್ನಲಾಗಿದೆ.
ಮಾಹಿತಿ ಪಡೆದು ಸ್ಥಳ ಪರಿಶೀಲನೆ ನಡೆಸಿದ ಪಿಎಸ್ಐ ರೂಮಾನ್ ಮತ್ತು ಪಿಎ ಆನಂದ್ ನೇತೃತ್ವದ ತಂಡ ಹಂತಕರ ಪತ್ತೆಗೆ ಶೋಧ ಕಾರ್ಯಕ್ಕಿಳಿದಿತ್ತು. ಇಂದು (ಬುಧವಾರ) ಬೆಳಗ್ಗಿವ ಜಾವ ಹಂತಕರ ಸುಳಿವು ಪಡೆದು ಮೊಹಿನ್ ಹಾಗೂ ಅದ್ನಾನ್ ಖಾನ್ ಬಂಧಿಸಲು ಹೋದ ವೇಳೆ ಆರೋಪಿಗಳು ಪೊಲೀಸರ ಮೇಲೆ ಹಲ್ಲೆ ಮಾಡಿದ್ದಾರೆ. ಶರಣಾಗುವಂತೆ ಗಾಳಿಯಲ್ಲಿ ಗುಂಡು ಹಾರಿಸಿದರೂ, ಬಗ್ಗದ ಆರೋಪಿಗಳ ಕಾಲಿಗೆ ಫೈರಿಂಗ್ ಮಾಡಿ ವಶಕ್ಕೆ ಪಡೆಯಲಾಗಿದೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಲಾಗುತ್ತಿದೆ. ಉಳಿದ ಮೂವರು ಆರೋಪಿಗಳನ್ನು ಬಂಧಿಸಿ ತನಿಖೆ ನಡೆಸಲಾಗುತ್ತಿದೆ.