ಲಾಡ್ಜ್ ನಲ್ಲಿ ಪತ್ನಿಯ ಕಾಲು ಕತ್ತರಿಸಿದ ಪತಿ ಅಂದರ್
Friday, March 18, 2022
ತುಮಕೂರು: ಇಲ್ಲಿನ ಅಶೋಕ ಲಾಡ್ಜ್ನಲ್ಲಿ ಬುಧವಾರ ಬೆಳಗ್ಗೆ ಪತ್ನಿಯ ಕಾಲನ್ನೇ ಮಚ್ಚಿನಿಂದ ಕತ್ತರಿಸಿ ವಿಕೃತಿ ಮೆರೆದ ಪತಿಯನ್ನು ಪೊಲೀಸರು ಬಂಧಿಸಿದ್ದಾರೆ. ಈ ಕೃತ್ಯಕ್ಕೆ ತನ್ನ ಪತಿಯ ಅಕ್ರಮ ಸಂಬಂಧವೇ ಕಾರಣವೆಂದು ಆಸ್ಪತ್ರೆಯಲ್ಲಿರುವ ಪತ್ನಿ ಬಾಯ್ಬಿಟ್ಟಿದ್ದಾಳೆ.
ಪತ್ನಿಯಿಂದ ಮಾರಕಾಯುಧದಿಂದ ಹಲ್ಲೆಗೆ ಒಳಗಾದ ದುರ್ದೈವಿ ಮಧುಗಿರಿ ಮೂಲದ ಅನಿತಾ. ಗದಗ ತಾಲೂಕು ಪಾಪನಾಶಿ ತಾಂಡಾದ ಬಾಬು(34) ಆರೋಪಿ.
ವೃತ್ತಿಯಲ್ಲಿ ಕಾರು ಚಾಲಕನಾಗಿರುವ ಬಾಬು ನಾಲ್ಕು ವರ್ಷಗಳ ಹಿಂದೆ ಅನಿತಾಳನ್ನು ಮದುವೆ ಆಗಿದ್ದ. ಆದರೆ ಮದುವೆಯಾದ ಕೆಲವೇ ದಿನಗಳಲ್ಲಿ ಇವರ ಸಂಸಾರದಲ್ಲಿ ಬಿರುಕು ಮೂಡಿತ್ತು. ಆದ್ದರಿಂದ ಇವರಿಬ್ಬರೂ ದೂರವಾಗಿ ವಿಚ್ಛೇದನ ಬಯಸಿದ್ದರು. ದೂರವಿದ್ದ ಪತ್ನಿಯನ್ನು ಮಾತನಾಡುವ ನೆಪದಲ್ಲಿ ತುಮಕೂರಿನ ಲಾಡ್ಜ್ಗೆ ಬುಧವಾರ ಬೆಳಗ್ಗೆ ಕರೆಸಿಕೊಂಡಿದ್ದ ಬಾಬು ಆಕೆಯ ಕಾಲು ಕತ್ತರಿಸಿದ್ದಾನೆ. ಇದೇ ವೇಳೆ ತಾನೂ ಚಾಕುವಿನಿಂದ ಚುಚ್ಚಿಕೊಂಡು ಹೈಡ್ರಾಮಾ ಸೃಷ್ಟಿಸಿದ್ದಾನೆ.
ಆದರೆ ಇದಾವುದಕ್ಕೂ ಕರಗದ ಪತ್ನಿ, ಈ ಕೃತ್ಯಕ್ಕೆ ಕಾರಣವೇನೆಂದು ಹೇಳಿದ್ದಾಳೆ. ಬಳಿಕ ಪತ್ನಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ವಿಷಯ ತಿಳಿದ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ. ಕೊಲೆಗೈಯುವ ಉದ್ದೇಶದಿಂದಲೇ ಲಾಡ್ಜ್ಗೆ ಪತ್ನಿಯನ್ನು ಕರೆಸಿಕೊಂಡ ಬಾಬು, ಬ್ಯಾಗ್ನಲ್ಲಿ ಮಚ್ಚನ್ನೂ ತಂದಿದ್ದ. ಆಕೆಯ ತೊಡೆ ಭಾಗಕ್ಕೆ ಮಚ್ಚಿನೇಟು ಬಿದ್ದು, ಗಂಭೀರ ಗಾಯಗೊಂಡ ಅನಿತಾಗೆ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ತನ್ನ ಪತಿಗೆ ಅಕ್ರಮ ಸಂಬಂಧವಿತ್ತು. ಈ ಬಗ್ಗೆ ಪ್ರಶ್ನೆ ಮಾಡಿದ್ದಕ್ಕೆ ಮಾತನಾಡುವ ನೆಪದಲ್ಲಿ ಕರೆಸಿಕೊಂಡು ತನ್ನನ್ನು ಕೊಲೆ ಮಾಡಲು ಯತ್ನಿಸಿದ್ದಾನೆ ಎಂದು ಅನಿತಾ ಪೊಲೀಸರ ಮುಂದೆ ಕಣ್ಣೀರಿಟ್ಟಿದ್ದಾರೆ. ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.