
ಗ್ರಾಮದೇವತೆಯ ಉತ್ಸವದಲ್ಲಿ ತುಂಡುಡುಗೆ ತೊಟ್ಟು ಅಶ್ಲೀಲ ಡ್ಯಾನ್ಸ್ ಮಾಡಿದ ನರ್ತಕಿಯರು!
Wednesday, March 9, 2022
ಮಂಡ್ಯ: ಇಲ್ಲಿನ ಗ್ರಾಮದೇವತೆಯ ಉತ್ಸವವೊಂದರಲ್ಲಿ ತುಂಡುಡುಗೆ ತೊಟ್ಟ ಮಹಿಳಾ ನರ್ತಕಿಯರು ವೇದಿಕೆಯಲ್ಲಿ ಮಾದಕವಾಗಿ ನೃತ್ಯ ಮಾಡುತ್ತಾ, ಜನರ ಮುಂದೆ ಅಸಭ್ಯವಾಗಿ ನಡೆದುಕೊಂಡಿದ್ದಾರೆ. ಅಲ್ಲದೆ ಅವರು ಬಾಲಕನೊಬ್ಬನನ್ನು ವೇದಿಕೆಗೆ ಕರೆದು ಮುತ್ತಿಟ್ಟು ಡಬಲ್ ಮೀನಿಂಗ್ ಸನ್ನೆ ಮಾಡಿ ಕಿರಿಕಿರಿ ಮಾಡಿದ್ದಾರೆ.
ಈ ಅಶ್ಲೀಲ ನರ್ತನ ಮಂಡ್ಯ ಜಿಲ್ಲೆ ನಾಗಮಂಗಲ ತಾಲೂಕಿನ ತೊಳಸಿಕೊಂಬರಿ ಗ್ರಾಮ ನಡೆದಲ್ಲಿ ಮಂಗಳವಾರ ರಾತ್ರಿ ನಡೆದಿದೆ. ಮಾದಕವಾಗಿ ನೃತ್ಯ ಮಾಡಿದ ಯುವತಿಯರ ಅಶ್ಲೀಲ ವರ್ತನೆಯಿಂದ ಗ್ರಾಮದ ಮಹಿಳೆಯರು ಮತ್ತು ನಾಗರಿಕರಿಗೆ ಇರಿಸುಮುರಿಸು ಉಂಟಾಗಿದೆ. ಈ ಎಲ್ಲಾ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಹಬ್ಬದ ಸಂದರ್ಭ ಇಂಥವರನ್ನು ಕರೆಸಿದ್ಯಾಕೆ? ಇದ್ಹೇನು ಪಬ್ ಕಾರ್ಯಕ್ರಮವೇ ಎಂದು ಆಯೋಜಕರನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ.
ಮಾದಕ ನೃತ್ಯಕ್ಕೂ ಮುನ್ನ ಈ ವೇದಿಕೆಯಲ್ಲಿ ನಡೆದಿರುವ ಕಾರ್ಯಕ್ರಮದಲ್ಲಿ ಮಾಜಿ ಸಚಿವ ಚಲುವರಾಯಸ್ವಾಮಿ ಭಾಗವಹಿಸಿದ್ದರು. ಗ್ರಾಮದೇವತೆ ಹಬ್ಬದ ಹಿನ್ನೆಲೆಯಲ್ಲಿ ತೊಳಸಿಕೊಂಬರಿ ಗ್ರಾಮದಲ್ಲಿ ರಸಮಂಜರಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಹುಡುಗಿಯರನ್ನು ಕರೆಸಿಕೊಂಡು ಪಡ್ಡೆ ಹುಡುಗರಿಗಾಗಿ ಮಧ್ಯರಾತ್ರಿವರೆಗೂ ಮಾದಕ ನೃತ್ಯ ಮಾಡಿಸಲಾಗಿದೆ. ಪಡ್ಡೆ ಹುಡುಗರನ್ನು ಹುಚ್ಚೆಬ್ಬಿಸುವ ಭರದಲ್ಲಿ ನರ್ತಕಿಯರು ಇದೊಂದು ದೇವರ ಹಬ್ಬದ ಹಿನ್ನೆಲೆಯಲ್ಲಿ ಆಯೋಜಿಸಿರುವ ಕಾರ್ಯಕ್ರಮ ಎಂದು ಮರೆತಿದ್ದರು. ಅಲ್ಲದೆ ಅತ್ತ ಆಯೋಜಕರೂ ಅವರಿಗೆ ಸೂಚನೆ ನೀಡುವುದನ್ನು ಮರೆತು ಅಶ್ಲೀಲ ನೃತ್ಯ ಪ್ರದರ್ಶನ ಮಾಡಿಸಿ ಸಾರ್ವಜನಿಕರ ಟೀಕೆಗೆ ಗುರಿಯಾಗಿದ್ದಾರೆ.