ಬಳ್ಳಾರಿ ಪಾಲಿಕೆ ಮೇಯರ್ ಚುನಾವಣೆ: ಮೇಯರ್, ಉಪ-ಮೇಯರ್ 'ಕೈ' ಮಡಿಲಿಗೆ
ಬಳ್ಳಾರಿ ಪಾಲಿಕೆ ಮೇಯರ್ ಚುನಾವಣೆ: ಮೇಯರ್, ಉಪ-ಮೇಯರ್ 'ಕೈ' ಮಡಿಲಿಗೆ
ರಾಜ್ಯದಲ್ಲಿ ಭಾರೀ ಕುತೂಹಲ ಮೂಡಿಸಿದ್ದ ಬಳ್ಳಾರಿ ಮಹಾನಗರ ಪಾಲಿಕೆಯ ಅಧಿಕಾರದ ಗದ್ದುಗೆಯನ್ನು ಕಾಂಗ್ರೆಸ್ ವಶಪಡಿಸಿದೆ. ಮೇಯರ್ ಆಗಿ ಕಾಂಗ್ರೆಸ್ ಸದಸ್ಯೆ ಎಂ. ರಾಜೇಶ್ವರಿ ಸುಬ್ಬರಾಯುಡು, ಉಪಮೇಯರ್ ಆಗಿ ಮಾಲನ್ ಬೀ ಆಯ್ಕೆಯಾಗಿದ್ದಾರೆ.
ಬಳ್ಳಾರಿ ಪಾಲಿಕೆಯಲ್ಲಿ ಒಟ್ಟು 39 ವಾರ್ಡ್‌ಗಳು ಇದ್ದು, ಈ ಪೈಕಿ ಕಾಂಗ್ರೆಸ್ 21 ಸದಸ್ಯರನ್ನು ಹೊಂದಿದೆ. ಬಿಜೆಪಿ 13 ಹಾಗೂ ಐವರು ಪಕ್ಷೇತರ ಸದಸ್ಯರು ಗೆಲುವು ಸಾಧಿಸಿದ್ದರು.
ಬಳ್ಳಾರಿ ಮಹಾನಗರ ಪಾಲಿಕೆಗೆ ಚುನಾವಣೆ ನಡೆದು ಸುಮಾರು ಒಂದು ವರ್ಷಗಳಾಗುತ್ತಾ ಬಂದರೂ ಮೇಯರ್, ಉಪಮೇಯರ್ ಚುನಾವಣೆ ನಡೆದಿರಲಿಲ್ಲ. ಮೇಯರ್, ಉಪಮೇಯರ್ ಆಯ್ಕೆ ಚುನಾವಣೆ ಎರಡು ಬಾರಿ ಮುಂದೂಡಿಕೆಯಾಗಿತ್ತು.
ಇದೀಗ, ನೂತನ ಮೀಸಲಾತಿ ಪಟ್ಟಿಯೊಂದಿಗೆ ಶನಿವಾರ ಮೇಯರ್ ಮತ್ತು ಉಪಮೇಯರ್ ಚುನಾವಣೆ ನಡೆಯಿತು. ಇದರ ಜೊತೆಗೆ 4 ಸ್ಥಾಯಿ ಸಮಿತಿಗಳಿಗೂ ಚುನಾವಣೆ ನಡೆಯಿತು.
ಕೈ ಪಾಳಯದಿಂದ ಮೇಯರ್ ಹುದ್ದೆಗೆ ರಾಜೇಶ್ವರಿ, ಉಪಮೇಯರ್ ಅಭ್ಯರ್ಥಿಯಾಗಿ ಮಾಲನ್ ಬೀ ಕಣಕ್ಕೆ ಇಳಿದರು. ಇವರಿಗೆ ಎದುರಾಗಿ ಬಿಜೆಪಿಯಿಂದ ಕ್ರಮವಾಗಿ ಸುರೇಖಾ ಮಲ್ಲನಗೌಡ ಮತ್ತು ಗೋವಿಂದರಾಜಲು ನಾಮಪತ್ರ ಸಲ್ಲಿಸಿದ್ದರು.
ಪಕ್ಷದ 21 ಸದಸ್ಯರು ಹಾಗೂ 5 ಪಕ್ಷೇತರ ಸದಸ್ಯರ ಬೆಂಬಲದೊಂದಿಗೆ ಕಾಂಗ್ರೆಸ್ ಪಾಲಿಕೆಯ ಅಧಿಕಾರ ಚುಕ್ಕಾಣಿ ಹಿಡಿಯುವಲ್ಲಿ ಯಶಸ್ವಿಯಾಯಿತು.