Enquiry on Fire to Electric Vehicle- ಪದೇ ಪದೇ ಎಲೆಕ್ಟ್ರಿಕ್ ಸ್ಕೂಟರ್‌ಗಳಿಗೆ ಬೆಂಕಿ: ತನಿಖೆಗೆ ಕೇಂದ್ರ ಸರ್ಕಾರ ಆದೇಶ
ಪದೇ ಪದೇ ಎಲೆಕ್ಟ್ರಿಕ್ ಸ್ಕೂಟರ್‌ಗಳಿಗೆ ಬೆಂಕಿ: ತನಿಖೆಗೆ ಕೇಂದ್ರ ಸರ್ಕಾರ ಆದೇಶ
ಪದೇ ಪದೇ ಎಲೆಕ್ಟ್ರಿಕ್ ಸ್ಕೂಟರ್ ಗಳಿಗೆ ಬೆಂಕಿ ಹತ್ತುತಿರುವ ಘಟನೆಗಳು ಸಂಭವಿಸುತ್ತಿದ್ದು, ಈ ಹಿನ್ನೆಲೆಯಲ್ಲಿ ಎಲೆಕ್ಟ್ರಿಕ್ ಸ್ಕೂಟರ್ ತಯಾರಕ 'ಓಲಾ' ವಿರುದ್ಧ ಕೇಂದ್ರ ಸರ್ಕಾರ ತನಿಖೆಗೆ ಆದೇಶ ನೀಡಿದೆ.
ಕೆಲ ದಿನಗಳ ಹಿಂದೆ, ಪುಣೆಯಲ್ಲಿ ನಿಲ್ಲಿಸಲಾಗಿದ್ದ ಸ್ಕೂಟರ್ ಗೆ ಬೆಂಕಿ ಕಾಣಿಸಿಕೊಂಡಿತ್ತು. ಈ ಬಗ್ಗೆ ಕಂಪನಿ ವಿರುದ್ಧ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಸಾರಿಗೆ ಇಲಾಖೆಗೆ ಕೇಂದ್ರ ಸಚಿವಾಲಯ ಸೂಚನೆ ನೀಡಿದೆ.
ಅದೇ ರೀತಿಯಲ್ಲಿ, ಕಳೆದ ವಾರ ತಮಿಳುನಾಡಿನ ವೆಲ್ಲೂರಿನಲ್ಲಿ ಒಕಿನಾವಾ ಕಂಪನಿಯ ಎಲೆಕ್ಟ್ರಿಕ್ ಸ್ಕೂಟರ್ ಸ್ಪೋಟಗೊಂಡಿತ್ತು. ಈ ಘಟನೆಯ ಬಗ್ಗೆಯೂ ಸಮಗ್ರ ತನಿಖೆ ನಡೆಸುವಂತೆ ಆದೇಶ ಮಾಡಲಾಗಿದೆ.
ತಮಿಳು ನಾಡಿನಲ್ಲಿ ನಡೆದ ಸ್ಕೂಟರ್ ಸ್ಫೋಟ ಪ್ರಕರಣದಲ್ಲಿ ಮನೆಗೆ ಬೆಂಕಿ ಹತ್ತಿಕೊಂಡು ತಂದೆ ಮತ್ತು ಮಗಳು ಸಾವನ್ನಪ್ಪಿದ್ದರು.
ಹೊಸ ಆವಿಷ್ಕಾರವಾದ ಎಲೆಕ್ಟ್ರಿಕ್ ಸ್ಕೂಟರ್ ಗಳು ಬೆಂಕಿ ದುರಂತಕ್ಕೆ ಈಡಾಗುವುದು ಆತಂಕಕಾರಿ. ಈ ವಿಚಾರವನ್ನು ಕೇಂದ್ರ ಸರ್ಕಾರ ಕೂಡ ಗಂಭೀರವಾಗಿ ಪರಿಗಣಿಸಿದೆ. ಇಂತಹ ಘಟನೆಗಳು ಜನರನ್ನು ಇ-ಸ್ಕೂಟರ್ ಗಳಿಂದ ಜನರನ್ನು ದೂರ ಇಡಬಹುದು ಎಂದು ಸರ್ಕಾರ ಆತಂಕ ವ್ಯಕ್ತಪಡಿಸಿದೆ.
ಆದರೆ, ಈ ತನಿಖೆಯ ಬಗ್ಗೆ ಓಲಾ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಕಳೆದ ವಾರ ಪುಣೆಯಲ್ಲಿ Ola S1 Pro ಸ್ಕೂಟರ್ ಸ್ಫೋಟಗೊಂಡ ಘಟನೆ ಮತ್ತು ಅದರ ವೀಡಿಯೋ ವೈರಲ್ ಆಗಿದೆ. ಬೆಂಕಿ ಹೊತ್ತಿಕೊಂಡ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಎಲ್ಲರಿಗೂ ಶಾಕ್ ನೀಡಿದೆ.