ಮಂಗಳೂರು: ಒತ್ತಾಯಪೂರ್ವಕ ಬಂದ್ ನಡೆದಿಲ್ಲ, ಇದು ಸ್ವಯಂಪ್ರೇರಿತ, ಶಾಂತಿಯುತ ಬಂದ್: ಎನ್.ಶಶಿಕುಮಾರ್
Thursday, March 17, 2022
ಮಂಗಳೂರು: ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಎಲ್ಲೂ ಒತ್ತಾಯಪೂರ್ವಕವಾದ ಬಂದ್ ನಡೆದಿಲ್ಲ. ಇದು ಸ್ವಯಂಪ್ರೇರಿತ ಹಾಗೂ ಶಾಂತಿಯುತ ಬಂದ್ ಆಗಿದೆ ಎಂದು ಮಂಗಳೂರು ನಗರ ಪೊಲೀಸ್ ಕಮಿಷನರ್ ಎನ್.ಶಶಿಕುಮಾರ್ ಹೇಳಿದರು.
ನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು ಹಿಜಾಬ್ ವಿಚಾರದ ಹೈಕೋರ್ಟ್ ತೀರ್ಪು ಹಿನ್ನೆಲೆಯಲ್ಲಿ ಮುಸ್ಲಿಂ ಸಂಘಟನೆಗಳು ರಾಜ್ಯ ಬಂದ್ ಗೆ ಕರೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಮಂಗಳೂರು ನಗರದಲ್ಲಿ ಕೆಲವರು ಸ್ವಯಂಪ್ರೇರಿತವಾಗಿ ಬಂದ್ ಗೆ ಬೆಂಬಲ ಸೂಚಿಸಿ ಅಂಗಡಿ-ಮುಂಗಟ್ಟು, ವ್ಯಾಪಾರ - ವಹಿವಾಟು, ಶಾಲಾ - ಕಾಲೇಜುಗಳು, ಸಾರಿಗೆ ಸಂಚಾರಗಳನ್ನು ಸ್ಥಗಿತಗೊಳಿಸಿ ಬಂದ್ ಗೆ ಬೆಂಬಲ ಸೂಚಿಸಿದ್ದಾರೆ. ಅದನ್ನು ಹೊರತುಪಡಿಸಿದರೆ ಉಳಿದೆಲ್ಲಂತೆ ನಗರದಲ್ಲಿ ಜನಜೀವನ ಸಾಮಾನ್ಯವಾಗಿದೆ. ಪ್ರತೀದಿನದಂತೆ ವ್ಯಾಪಾರ ವಹಿವಾಟು, ಜನ ಸಂಚಾರ ನಡೆಯುತ್ತಿದೆ ಎಂದು ಹೇಳಿದರು.
ಮಂಗಳೂರು ಬಂದ್ ಹೇಗಿದೆ?
ಹಿಜಾಬ್ ವಿಚಾರದಲ್ಲಿ ಹೈಕೋರ್ಟ್ ತೀರ್ಪು ವಿರೋಧಿಸಿ ಮುಸ್ಲಿಂ ಸಂಘಟನೆಗಳಿಂದ ಬಂದ್ ಗೆ ಕರೆ ಕೇಳಿ ಬಂದಿರುವ ಹಿನ್ನೆಲೆಯಲ್ಲಿ ಮಂಗಳೂರಿನ ಮುಸ್ಲಿಂ ಬಾಹುಳ್ಯದ ಪ್ರದೇಶಗಳು ಸಂಪೂರ್ಣ ಬಂದ್ ಆಗಿವೆ. ನಗರದ ಪ್ರಮುಖ ವ್ಯಾಪಾರಿ ಕೇಂದ್ರವಾದ ಬಂದರು ಪ್ರದೇಶ ಭಾಗಶಃ ಬಂದ್ ಆಗಿದ್ದು, ಇಲ್ಲಿನ ಬಹುತೇಕ ಮುಸ್ಲಿಂ ವ್ಯಾಪಾರಸ್ಥರು ಬಂದ್ ಗೆ ಬೆಂಬಲ ವ್ಯಕ್ತಪಡಿಸಿ ವ್ಯಾಪಾರ ವಹಿವಾಟುಗಳನ್ನು ಸ್ಥಗಿತಗೊಳಿಸಿದ್ದಾರೆ. ಇಲ್ಲಿನ ಕೆಲಸ ಮಾಡುವ ಮುಸ್ಲಿಂ ದಿನಗೂಲಿ ನೌಕೆ ಬಾರದ ಹಿನ್ನೆಲೆಯಲ್ಲಿ ಬಹಳಷ್ಟು ವ್ಯಾಪಾರ ವಹಿವಾಟು ಸ್ಥಗಿತಗೊಂಡಿದೆ. ಮುಸ್ಲಿಮ್ ಬಾಹುಳ್ಯವಿರುವ ನಗರದ ಇತರೆಡೆಗಳಲ್ಲೂ ಇದೇ ರೀತಿಯ ಬಂದ್ ಆಗಿರೋದು ಕಂಡುಬರುತ್ತದೆ. ಮುಸ್ಲಿಂ ವ್ಯಾಪಾರಿಗಳು ತಮ್ಮ ವ್ಯಾಪಾರ-ವಹಿವಾಟುಗಳನ್ನು ಸ್ಥಗಿತಗೊಳಿಸಿ ಬಂದ್ ಗೆ ಬೆಂಬಲ ವ್ಯಕ್ತಪಡಿಸಿದ್ದಾರೆ.