ಮಗು ಜನಿಸುವ ಮೊದಲೇ ಪತಿಗೆ ದುಬಾರಿ ಬೆಲೆಯ ಲ್ಯಾಂಬೋರ್ಗಿನಿ ಕಾರು ಗಿಫ್ಟ್ ನೀಡಿದ ಪತ್ನಿ: ಇದಕ್ಕೆ ಕಾರಣವೇನು ಗೊತ್ತೇ
Thursday, March 17, 2022
ಕೌಲಾಲಂಪುರ: ಮಲೇಷ್ಯಾದ 19 ವರ್ಷದ ಕಾಸ್ಮೆಟಿಕ್ ಇನ್ಫ್ಲುಯೆನ್ಸರ್ ತಮ್ಮ ಮೊದಲ ಮಗುವನ್ನು ಬರಮಾಡಿಕೊಳ್ಳುವ ಮೊದಲೇ ಪತಿಗೆ 1,60,000 ಪೌಂಡ್ (1,59,65,031 ರೂ.) ಬೆಲೆಯ ದುಬಾರಿ ಲ್ಯಾಂಬೋರ್ಗಿನಿ ಹುರಾಕ್ಯಾನ್ ಇವೊ ಕಾರನ್ನು ಉಡುಗೊರೆಯಾಗಿ ನೀಡಿದ್ದಾರೆ.
ಗರ್ಭಿಣಿಯಾಗಿರುವ ಅನೆಸ್ ಅಯುನಿ ಒಸ್ಮಾನ್ ಕುಟುಂಬದ ಸಂಪ್ರದಾಯದ ಪ್ರಕಾರ ಕೆಲಂಟಾನ್ನಲ್ಲಿರುವ ತಮ್ಮ ತವರು ಮನೆಗೆ ತೆರಳಬೇಕಾಗಿದೆ. ಅಲ್ಲದೆ ಆಕೆ ಮಗು ಜನಿಸಿದ ಬಳಿಕ 100 ದಿನಗಳ ಕಾಲ ಒಂದೇ ಕೋಣೆಯಲ್ಲಿ ಇರಬೇಕಾಗುತ್ತದೆ. ಮಗು ಜನಿಸಿದ ಬಳಿಕ ಎದುರಾಗುವ ಯಾವುದೇ ತೊಂದರೆಗಳನ್ನು ತಪ್ಪಿಸಿಕೊಳ್ಳಲು ಒಸ್ಮಾನ್ ಒಂದೇ ಕಡೆ ಇರಬೇಕಾಗಿದೆ. ಈ ಸಮಯದಲ್ಲಿ ಒಸ್ಮಾನ್ಗೆ ಪತಿಯೇ ಆಧಾರವಾಗುತ್ತಾರೆ.
ಆದ್ದರಿಂದ ಅನೆಸ್ ಅಯುನಿ ಒಸ್ಮಾನ್ ರವರು ತನ್ನ ಪತಿ ಹಾಗೂ ಉದ್ಯಮಿ ವೆಲ್ಡಾನ್ ಜುಲ್ಕೆಫ್ಲಿ (20) ಮೇಲೆ ಸಂಪೂರ್ಣ ಅವಲಂಬಿತರಾಗಿರುತ್ತಾರೆ. ಈ ದಿನಗಳಲ್ಲಿ ಅವರಿಗೆ ಪ್ರತಿಯೊಂದು ನೆರವನ್ನು ಪತಿಯೇ ಮಾಡಬೇಕಾಗುತ್ತದೆ. ನ್ಯಾಪ್ಕಿನ್ ಬದಲಾವಣೆಯಿಂದ ಹಿಡಿದು ಪ್ರತಿಯೊಂದು ಕೆಲಸವನ್ನು ಮಾಡಬೇಕಾಗಿರುವುದರಿಂದ ಪತಿ ವೆಲ್ಡಾನ್ ಜುಲ್ಕೆಫ್ಲಿ ನಿದ್ರೆಯಿಲ್ಲದ ರಾತ್ರಿಗಳನ್ನು ಕಳೆಯಬೇಕಾಗುತ್ತದೆ. ಮಗು ಮತ್ತು ತಾಯಿಯ ಸಂಪೂರ್ಣ ಜವಾಬ್ದಾರಿ ವೆಲ್ಡಾನ್ ಮೇಲಿರುತ್ತದೆ.
ಆದ್ದರಿಂದಲೇ ವೆಲ್ಡಾನ್ಗೆ ಸರ್ಪ್ರೈಸ್ ಆಗಿ ಪತ್ನಿ ಒಸ್ಮಾನ್ ಕಾರೊಂದನ್ನು ಉಡುಗೊರೆಯಾಗಿ ನೀಡಿದ್ದಾರೆ. ಇದರ ಟಿಕ್ಟಾಕ್ ವೀಡಿಯೋ ವೈರಲ್ ಆಗಿದೆ. ಅನಿರೀಕ್ಷಿತ ಉಡುಗೊರೆಯಿಂದ ಸಂತೋಷಗೊಂಡ ವೆಲ್ಡಾನ್ ತನ್ನ ಪತ್ನಿಯನ್ನು ತಬ್ಬಿ, ಬೇಬಿ ಬಂಪ್ಗೆ ಮುತ್ತಿಡುತ್ತಿರುವ ದೃಶ್ಯ ಈ ವೀಡಿಯೋದಲ್ಲಿದೆ. ಈ ಟಿಕ್ಟಾಕ್ ವೀಡಿಯೋ ಒಂದು ಲಕ್ಷಕ್ಕೂ ಅಧಿಕ ವೀಕ್ಷಣೆಯನ್ನು ಪಡೆದುಕೊಂಡಿದೆ. ವಿಡಿಯೋ ನೋಡಿದವರು ಕಮೆಂಟ್ ಮಾಡುತ್ತಿದ್ದು, ಪತಿಯ ಬದಲು ಪೂರ್ಣ ಸಮಯಕ್ಕೆ ನರ್ಸ್ ಆಯ್ಕೆ ಮಾಡಿಕೊಂಡಿದ್ದರೆ, ಇದಕ್ಕಿಂತ ಅಗ್ಗವಾಗಿರುತ್ತಿತ್ತು ಎಂದು ನೆಟ್ಟಿಗರೊಬ್ಬರು ಕಮೆಂಟ್ ಮಾಡಿದ್ದಾರೆ. ವೆಲ್ಡಾನ್ ಬಹಳ ಅದೃಷ್ಟವಂತ ಎಂದು ಇನ್ನೊಬ್ಬ ನೆಟ್ಟಿಗ ಕಮೆಂಟ್ ಮಾಡಿದ್ದಾರೆ. ಅಂದಹಾಗೆ ಒಸ್ಮಾನ್ ಅವರು ಮಾರ್ಚ್ ತಿಂಗಳ ಅಂತ್ಯಕ್ಕೆ ಮಗುವಿನ ಜನ್ಮ ನೀಡಲಿದ್ದಾರೆ.