ನಟಿ ಪ್ರಿಯಾಂಕಾ ಚೋಪ್ರಾ ಐಷಾರಾಮಿ ಕಾರು ಖರೀದಿಸಿದ ಬೆಂಗಳೂರು ಮೂಲದ ಉದ್ಯಮಿ!
Saturday, March 19, 2022
ಬೆಂಗಳೂರು: ಬಾಲಿವುಡ್, ಹಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ತಮ್ಮ ಕಾರೊಂದನ್ನು ಮಾರಾಟ ಮಾಡಿರುವ ಕಾರಣಕ್ಕೆ ಭಾರೀ ಸುದ್ದಿಯಲ್ಲಿದ್ದಾರೆ. ಪ್ರಿಯಾಂಕಾ ಚೋಪ್ರಾ ಬಳಿ ಬಹಳಷ್ಟು ಐಷಾರಾಮಿ ಬ್ರಾಂಡೆಡ್ ಕಾರುಗಳಿವೆ ಎಂಬುದು ಎಲ್ಲರಿಗೂ ತಿಳಿದಿರುವುದೇ. ಇದೀಗ ಅವರ ಬಳಿಯಿರುವ 8 ಕೋಟಿ ರೂ. ಬೆಲೆಬಾಳುವ ರೋಲ್ಸ್ ರಾಯ್ಸ್ ಘೋಸ್ಟ್ ಕಾರನ್ನು ಬೆಂಗಳೂರು ಮೂಲದ ವ್ಯಕ್ತಿಯೋರ್ವರಿಗೆ ಮಾರಾಟ ಮಾಡಿದ್ದಾರೆ ಎಂಬ ಸುದ್ದಿಗಳು ಹರಿದಾಡುತ್ತಿದೆ.
ಹೌದು, ಮೂಲಗಳ ಪ್ರಕಾರ, ಬೆಂಗಳೂರು ಮೂಲದ ಉದ್ಯಮಿಯೊಬ್ಬರಿಗೆ ನಟಿ ಪ್ರಿಯಾಂಕಾ ಚೋಪ್ರಾ ತಮ್ಮ ರೋಲ್ಸ್ ರಾಯ್ಸ್ ಘೋಸ್ಟ್ ಕಾರನ್ನು ಮಾರಾಟ ಮಾಡಿದ್ದಾರೆ. ಆದರೆ, ಈ ಕಾರನ್ನು ಖರೀದಿಸಿರುವ ವ್ಯಕ್ತಿ ಯಾರೆಂಬುದನ್ನು ನಟಿ ಪ್ರಿಯಾಂಕಾ ಚೋಪ್ರಾ ಎಲ್ಲಿಯೂ ಬಹಿರಂಗಪಡಿಸಿಲ್ಲ. ಇದರ ನಡುವೆ, ಪ್ರಿಯಾಂಕಾ ಚೋಪ್ರಾ ಆ ಕಾರನ್ನು ಮಾರಾಟ ಮಾಡಿದ್ದೇಕೆ ಎಂಬ ಪ್ರಶ್ನೆಗಳು ಕೇಳಿಬಂದಿವೆ. ಅಂದಹಾಗೆ, ರೋಲ್ಸ್ ರಾಯ್ಸ್ ಘೋಸ್ಟ್ ಕಾರನ್ನು ನಟಿ ಪ್ರಿಯಾಂಕಾ ಚೋಪ್ರಾ ತುಂಬಾ ಹೆಚ್ಚಾಗಿ ಬಳಸುತ್ತಿರಲಿಲ್ಲ ಎನ್ನಲಾಗಿದೆ.
ನಟಿ ಪ್ರಿಯಾಂಕಾ ಚೋಪ್ರಾ ರೋಲ್ಸ್ ರಾಯ್ಸ್ ಘೋಸ್ಟ್ ಕಾರನ್ನು ಖರೀದಿಸಿದ್ದು ಭಾರತದಲ್ಲಿ. ಆದರೆ, ಪ್ರಿಯಾಂಕಾ ಮದುವೆಯಾದ ಬಳಿಕ ಪತಿ ನಿಕ್ ಜೋನಸ್ ಜೊತೆ ಅಮೆರಿಕಾದಲ್ಲಿ ಸೆಟ್ ಆಗಿದ್ದಾರೆ. ಅವರ ತಾಯಿ ಮಧು ಚೋಪ್ರಾ ಕೂಡಾ ಈ ಕಾರನ್ನು ಬಳಸುತ್ತಿರಲಿಲ್ಲ. ಹಾಗಾಗಿ, ಕಾರನ್ನು ಮಾರಾಟ ಮಾಡುವುದು ಸೂಕ್ತ ಎಂದು ನಟಿ ನಿರ್ಧರಿಸಿದ್ದಾರೆ ಎನ್ನಲಾಗಿದೆ. ಸದ್ಯ ಬೆಂಗಳೂರು ಮೂಲದ ಉದ್ಯಮಿಯೊಬ್ಬರಿಗೆ ಆ ರೋಲ್ಸ್ ರಾಯ್ಸ್ ಘೋಸ್ಟ್ ಕಾರು ಮಾರಾಟ ಮಾಡಲಾಗಿದೆ ಎಂಬ ಮಾಹಿತಿ ಹರಿದಾಡುತ್ತಿದೆ. ಸದ್ಯ ಈ ವಿಚಾರ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದ್ದು, ನಟಿಯ ಕಾರು ಖರೀದಿಸಿದ ಆ ಬೆಂಗಳೂರು ಮೂಲದ ವ್ಯಕ್ತಿ ಯಾರು ಎಂಬ ಕುತೂಹಲ ಹಲವರಲ್ಲಿದೆ.