ಮಂಗಳೂರು: ಅನುಮತಿ ಪಡೆಯದೆ ವಿದೇಶಿ ಪ್ರವಾಸ ಮಾಡಿದ ಪೊಲೀಸ್ ಅಧಿಕಾರಿ ಅಮಾನತು
Tuesday, March 22, 2022
ಮಂಗಳೂರು: ಸಂಬಂಧಪಟ್ಟ ಇಲಾಖಾ ಮೇಲಾಧಿಕಾರಿಗಳ ಅನುಮತಿ ಪಡೆಯದೆ ಪೊಲೀಸ್ ಇಲಾಖೆಯ ನಿಯಮಾವಳಿಗಳನ್ನು ಉಲ್ಲಂಘಿಸಿ ವಿದೇಶಿ ಪ್ರವಾಸ ಮಾಡಿರುವ ಹಿನ್ನೆಲೆಯಲ್ಲಿ ಪೊಲೀಸ್ ಅಧಿಕಾರಿಯೋರ್ವರನ್ನು ಮಂಗಳೂರು ನಗರ ಪೊಲೀಸ್ ಕಮಿಷನರ್ ಎನ್.ಶಶಿಕುಮಾರ್ ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತು ಮಾಡಿ ಆದೇಶಿಸಿದ್ದಾರೆ.
ಸಂಚಾರ ಉತ್ತರ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ ಮಹಮ್ಮದ್ ಶರೀಫ್ ಅವರು ಊರಿನಲ್ಲಿರುವ ಮನೆಯಲ್ಲಿ ಧಾರ್ಮಿಕ ಕಾರ್ಯಕ್ರಮದ ನಿಮಿತ್ತ ಮಾರ್ಚ್ 16-19ರವರೆಗೆ ನಾಲ್ಕು ದಿನಗಳ ತುರ್ತು ರಜೆ ಪಡೆದಿದ್ದರು. ಮತ್ತೆ ಮಾರ್ಚ್ 20ರಂದು ಅನುಮತಿ ಪಡೆದು ರಜೆ ಮಂಜೂರಾತಿ ಪಡೆದಿದ್ದರು. ಆದರೆ ಈ ರಜೆಯ ಅವಧಿಯಲ್ಲಿ ಖಾಸಗಿಯಾಗಿ ದುಬೈಗೆ ಪ್ರವಾಸ ಕೈಗೊಂಡಿರುವುದು ತಿಳಿದು ಬಂದಿದೆ. ಆದರೆ ಕರ್ನಾಟಕ ನಾಗರಿಕ ಸೇವಾ(ನಡತೆ) ನಿಯಮ 2021ರ ನಿಯಮ 8ರ ಉಪನಿಯಮ 2ಕ್ಕೆ ಸಂಬಂಧಿಸಿದಂತೆ ಇಲಾಖಾ ಮೇಲಾಧಿಕಾರಿಗಳ ಪೂರ್ವಾನುಮತಿಯಿಲ್ಲದೆ ವಿದೇಶಿ ಪ್ರವಾಸ ಮಾಡುವಂತಿಲ್ಲ.
ಆದ್ದರಿಂದ ಕೆ.ಎಸ್.ಪಿ.ಡಿ.ಪಿ. ನಿಯಮಗಳು 1965/89ರ ನಿಯಮ 5ರ ಅನುಸಾರ ತಕ್ಷಣದಿಂದ ಜಾರಿಗೆ ಬರುವಂತೆ ಇಲಾಖಾ ವಿಚಾರಣೆ ಬಾಕಿಯಿರಿಸಿ ಸೇವೆಯಿಂದ ಅಮಾನತುಗೊಳಿಸಲಾಗಿದೆ. ಈ ಅಮಾನತು ಅವಧಿಯಲ್ಲಿ ಪೊಲೀಸ್ ಆಯುಕ್ತರ ಅನುಮತಿ ಇಲ್ಲದೆ ಕೇಂದ್ರ ಸ್ಥಾನ ಬಿಟ್ಟು ಹೋಗುವಂತಿಲ್ಲ. ಒಂದು ವೇಳೆ ಷರತ್ತು ಉಲ್ಲಂಘಿಸಿದ್ದಲ್ಲಿ ಮತ್ತೊಂದು ಪ್ರತ್ಯೇಕ ದೋಷಾರೋಪಣೆ ಹೊಂದಿಸಲಾಗುತ್ತದೆ. ಈ ಅವಧಿಯಲ್ಲಿ ಶೇ.50ರಷ್ಟು ಸಂಬಳ ಪಡೆಯಲು ಅರ್ಹರಿರುತ್ತಾರೆ. ಅಲ್ಲದೆ ಈ ಸಮಯದಲ್ಲಿ ಬೇರೆ ವೃತ್ತಿ, ವ್ಯಾಪಾರ ಕೈಗೊಳ್ಳುವಂತಿಲ್ಲ. ಸರಕಾರಿ ವಸತಿಗೃಹದಲ್ಲಿ ವಾಸವಿದ್ದಲ್ಲಿ ಅಮಾನತು ಹೊಂದಿದ ದಿನಾಂಕದಿಂದ ಬಾಡಿಗೆ ಮಾಫಿ ಸೌಲ ಪಡೆಯಲು ಅರ್ಹರಿರುವುದಿಲ್ಲ ಎಂದು ಮಂಗಳೂರು ಪೊಲೀಸ್ ಕಮಿಷನರ್ ಎನ್.ಶಶಿಕುಮಾರ್ ಅವರು ಅಮಾನತು ಪತ್ರದ ಸ್ಪಷ್ಟವಾಗಿ ತಿಳಿಸಲಾಗಿದೆ.