KSEEB Exam 2nd Topper- ಭರತನಾಟ್ಯ ವಿದ್ವತ್ ಅಂತಿಮ ಪರೀಕ್ಷೆ: ಮಂಗಳೂರಿಗೆ ವಂದನಾ ರಾಣಿ ದ್ವಿತೀಯ ಸ್ಥಾನ
ಭರತನಾಟ್ಯ ವಿದ್ವತ್ ಅಂತಿಮ ಪರೀಕ್ಷೆ: ಮಂಗಳೂರಿಗೆ ವಂದನಾ ರಾಣಿ ದ್ವಿತೀಯ ಸ್ಥಾನ
ಶಾಸ್ತ್ರೀಯ ಕಲೆಯಾಗಿರುವ ಭರತನಾಟ್ಯಕ್ಕೆ ಸಂಬಂಧಿಸಿದ ವಿದ್ವತ್ ಅಂತಿಮ ಪರೀಕ್ಷೆಯಲ್ಲಿ ಮಂಗಳೂರಿನ ವಂದನಾ ರಾಣಿ ಮಂಗಳೂರು ವ್ಯಾಪ್ತಿಗೆ ದ್ವಿತೀಯ ಸ್ಥಾನ ಗಳಿಸಿದ್ದಾರೆ.
ಭರತಾಂಜಲಿಯ ಹಿರಿಯ ಶಿಷ್ಯೆಯರಲ್ಲಿ ಒಬ್ಬಳಾದ ವಂದನಾ ರಾಣಿ, KSEEB ನಡೆಸಿದ ವಿದ್ವತ್ ಅಂತಿಮ ಪರೀಕ್ಷೆಗಳನ್ನು ಪೂರ್ಣಗೊಳಿಸಿ ಮಂಗಳೂರು ವ್ಯಾಪ್ತಿಗೆ 2nd ಟಾಪರ್ ಆಗಿ ಹೊರಹೊಮ್ಮಿದ್ದಾರೆ.
ಆಕೆಯ ಭರತನಾಟ್ಯದ ಪಯಣದಲ್ಲಿ 14 ವರ್ಷಗಳ ಕಾಲ ನಿರಂತರ ಪರಿಶ್ರಮ, ಅಪರಿಮಿತ ಉತ್ಸಾಹ ಮತ್ತು ಅರ್ಹನಿಶಿ ಅಭ್ಯಾಸಗಳ ಕಾರಣದಿಂದ ಈ ಗಮನಾರ್ಹ ಸಾಧನೆ ಮಾಡಿದ್ದಾರೆ.
ಕೇದಿಗೆ ವಸಂತ ರಾವ್ ಮತ್ತು ರೂಪಾ ರಾಣಿ ಅವರ ಪುತ್ರಿಯಾಗಿರುವ ವಂದನಾ ರಾಣಿ ತಮ್ಮ ಗುರು ಶ್ರೀಮತಿ ಪ್ರತಿಮಾ ಶ್ರೀಧರ್ ಮತ್ತು ಗುರು ಶ್ರೀ ಶ್ರೀಧರ್ ಹೊಳ್ಳ, ಭರತಾಂಜಲಿ, ಮಂಗಳೂರು ಅವರಿಂದ ತರಬೇತಿ ಪಡೆದಿದ್ದಾರೆ. 2021ರಲ್ಲಿ ನಡೆದ ವಿದ್ವತ್ ಆಂತಿಮ ಪರೀಕ್ಷೆಯಲ್ಲಿ 87% ಅಂಕ ಗಳಿಸಿದ್ದಾರೆ.
'ಭರತಾಂಜಲಿ'ಯ ಪ್ರಮುಖ ನೃತ್ಯಗಾರರಲ್ಲಿ ಒಬ್ಬರಾದ ಇವರು, ಚಿದಂಬರದಲ್ಲಿ ನಾಟ್ಯಾಂಜಲಿ ಉತ್ಸವ, ಮೈಸೂರು ದಸರಾ, ಹಂಪಿ ಉತ್ಸವ, ಆಳ್ವಾಸ್ ನುಡಿಸಿರಿ ಸಹಿತ ಹಲವು ಪ್ರತಿಷ್ಠಿತ ಉತ್ಸವಗಳಲ್ಲಿ ಗುರುಗಳ ಜೊತೆ ಪ್ರದರ್ಶನ ನೀಡಿದ್ದಾರೆ.
ಕರ್ನಾಟಿಕ್ ಸಂಗೀತದಲ್ಲಿ ಹಿರಿಯ ಶ್ರೇಣಿಯನ್ನು ಪೂರ್ಣಗೊಳಿಸಿದ ಇವರು, ಗುರು ಸತ್ಯವತಿ ಮುಡಂಬಡಿತ್ತಾಯ ಇವರಲ್ಲಿ ಒಂದು ದಶಕದ ತರಬೇತಿಯನ್ನು ಮತ್ತು ಗುರು ಶ್ರೀ ಮಧೂರು ಬಾಲಸುಬ್ರಹ್ಮಣ್ಯ, ಉಡುಪಿ ಇವರಲ್ಲಿ ಸಂಗೀತ ತರಬೇತಿಯನ್ನು ಪಡೆದಿದ್ದಾರೆ.
ಅನೇಕ ಗಮನಾರ್ಹವಾದ ಸಾಧನೆಗಳನ್ನು ಮಾಡಿರುವ ವಂದನಾ ರಾಣಿ, ಭರತಾಂಜಲಿಯ ಕೆಲವು ಉತ್ಸವಗಳು ಮತ್ತು ಪ್ರದರ್ಶನಗಳಿಗೆ ಹಿನ್ನೆಲೆ ಗಾಯಕಿಯಾಗಿ ಹಾಡುಗಾರಿಕೆ ಮಾಡಿದ್ದಾರೆ.
ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜಿನಲ್ಲಿ (ಆಟೊನೊಮಸ್) ಶುದ್ಧ ವಿಜ್ಞಾನದಲ್ಲಿ ಪದವಿಯನ್ನು ಪೂರ್ಣಗೊಳಿಸಿರುವ ವಂದನಾ ರಾಣಿ, ಪ್ರಸ್ತುತ ತಮಿಳುನಾಡಿನ ಚಿದಂಬರಂನ ಅಣ್ಣಾಮಲೈ ವಿಶ್ವವಿದ್ಯಾಲಯದಿಂದ ಭರತನಾಟ್ಯದಲ್ಲಿ ಸ್ನಾತಕೋತ್ತರ ಅಧ್ಯಯನವನ್ನು ಮಾಡುತ್ತಿದ್ದಾರೆ.