ಮಂಗಳೂರು: ಕಡಲ್ಕೊರೆತ ಸಂತ್ರಸ್ತರಿಗೆ ಮೀಸಲಿಟ್ಟಿದ್ದ ಸ್ಥಳದಲ್ಲಿ ಅನಧಿಕೃತವಾಗಿ ಮನೆಗಳನ್ನು ನಿರ್ಮಿಸುತ್ತಿದ್ದ ಬಿಲ್ಡರ್ ಮೇಲೆ ಪ್ರಕರಣ ದಾಖಲು
Thursday, March 24, 2022
ಮಂಗಳೂರು: ಕಡಲ್ಕೊರೆತ ಸಂತ್ರಸ್ತರಿಗೆಂದು ಮೀಸಲಿರಿಸಿದ್ದ ಸ್ಥಳದಲ್ಲಿ ಅಕ್ರಮವಾಗಿ ಮನೆಗಳನ್ನು ನಿರ್ಮಾಣ ಮಾಡುತ್ತಿದ್ದ ಆರೋಪದ ಮೇಲೆ ಬಿಲ್ಡರ್ ವಿರುದ್ಧ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಂಗಳೂರು ನಗರದ ಹೊರವಲಯದಲ್ಲಿರುವ ಕೋಟೆಕಾರು ಪಟ್ಟಣ ಪಂಚಾಯತ್ ವ್ಯಾಪ್ತಿಯ ಮಡ್ಯಾರು ಸಾಯಿನಗರದಲ್ಲಿ ಉಳ್ಳಾಲದ ಕಡಲ್ಕೊರೆತ ಸಂತ್ರಸ್ತರಿಗೆ 1.22 ಎಕರೆ ಜಾಗವನ್ನು ಮೀಸಲಿರಿಸಲಾಗಿತ್ತು. ಕೋಟ್ಯಂತರ ರೂ. ಮೌಲ್ಯದ ಈ ಸ್ಥಳದಲ್ಲಿ ಪ್ರಭಾವಿ ಬಿಲ್ಡರ್ ಶರತ್ ರಾಜ್ ಎಂಬಾತನು ಅನಧಿಕೃತವಾಗಿ ಮನೆಗಳನ್ನು ನಿರ್ಮಾಣ ಮಾಡುತ್ತಿದ್ದ ಎಂಬ ಆರೋಪ ಕೇಳಿ ಬಂದಿತ್ತು. ಈ ಬಗ್ಗೆ ಉಳ್ಳಾಲ ನಗರಸಭೆ ಮುಖ್ಯಾಧಿಕಾರಿ ರಾಯಪ್ಪ ದೂರು ನೀಡಿದ್ದರು.
ಈ ಹಿನ್ನೆಲೆಯಲ್ಲಿ ಉಳ್ಳಾಲ ಪೊಲೀಸರು ಇಂದು ಮಧ್ಯಾಹ್ನ ದಾಳಿ ನಡೆಸಿ, ಅನಧಿಕೃತ ಮನೆಗಳನ್ನು ಕೆಡವಿ ಹಾಕಿದ್ದಾರೆ. ಈ ಬಗ್ಗೆ ಬಿಲ್ಡರ್ ಶರತ್ ರಾಜ್ ಮೇಲೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಹಗರಣದಲ್ಲಿ ಉಳ್ಳಾಲ ನಗರಸಭೆ, ಕೋಟೆಕಾರು ಪ.ಪಂ. ಮತ್ತು ಕಂದಾಯ ಇಲಾಖೆಯ ಅಧಿಕಾರಿ ವರ್ಗ ಲಂಚ ಪಡೆದು ಶಾಮೀಲಾಗಿರುವ ಅನುಮಾನ ವ್ಯಕ್ತವಾಗಿದೆ. ಈ ಬಗ್ಗೆ ತನಿಖೆ ನಡೆಯುತ್ತಿದೆ.