
ಮಂಗಳೂರಿನಲ್ಲಿ ಮತ್ತೆ ಹಿಜಾಬ್ ವಿವಾದ: ರಥಬೀದಿ ಕಾಲೇಜಿನಲ್ಲಿ ವಿದ್ಯಾರ್ಥಿಗಳ ಗುಂಪುಗಳ ಮಧ್ಯೆ ಸಂಘರ್ಷ
Friday, March 4, 2022
ಮಂಗಳೂರು: ಕೊಂಚ ಸಮಯ ತಣ್ಣಗಿದ್ದ ಹಿಜಾಬ್ ವಿವಾದ ಮತ್ತೆ ಬುಗಿಲೆದ್ದಿದೆ. ನಗರದ ರಥಬೀದಿಯ ಡಾ.ಪಿ.ದಯಾನಂದ ಪೈ-ಸತೀಶ್ ಪೈ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಿನ್ನೆಯಿಂದ ಹಿಜಾಬ್ ಸಂಘರ್ಷ ತಲೆದೋರಿದೆ.
ನಿನ್ನೆಯೇ ಹಿಜಾಬ್ ವಿಚಾರವಾಗಿ ಗೊಂದಲ ಉಂಟಾಗಿತ್ತು. ಪ್ರಾಂಶುಪಾಲರ ಆದೇಶದಂತೆ ಮುಸ್ಲಿಂ ವಿದ್ಯಾರ್ಥಿನಿಯರು ಹಿಜಾಬ್ ಧರಿಸದೆ, ಶಾಲು ಹಾಕಿಕೊಂಡು ಇಂದು ಪರೀಕ್ಷೆಗೆ ಹಾಜರಾಗಿದ್ದರು. ಆದರೆ ಇದಕ್ಕೆ ಕೆಲ ವಿದ್ಯಾರ್ಥಿಗಳ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ವಿದ್ಯಾರ್ಥಿಗಳ ಆಕ್ಷೇಪದ ಹಿನ್ನೆಲೆಯಲ್ಲಿ ಹಿಜಾಬ್ ಧರಿಸಿದ ವಿದ್ಯಾರ್ಥಿನಿಯರನ್ನು ತರಗತಿ ಹಾಜರಾಗಲು ಪ್ರಾಂಶುಪಾಲರು ನಿರಾಕರಿಸಿದ್ದಾರೆ.
ಹೀಗಾಗಿ ಆಕ್ಷೇಪ ವ್ಯಕ್ತಪಡಿಸಿದ ವಿದ್ಯಾರ್ಥಿಗಳು ಹಾಗೂ ಹಿಜಾಬ್ ಧರಿಸಿರುವ ವಿದ್ಯಾರ್ಥಿನಿಯರ ಮಧ್ಯೆ ವಾಗ್ವಾದ ಉಂಟಾಗಿದೆ. ಅಲ್ಲದೆ ಕಾಲೇಜು ಗೇಟಿನ ಮುಂಭಾಗದಲ್ಲೇ ವಿದ್ಯಾರ್ಥಿಗಳು ಪರಸ್ಪರ ಜಗಳಕ್ಕಿಳಿದ ಘಟನೆಯೂ ನಡೆದಿದೆ. ತಕ್ಷಣ ಪೊಲೀಸರು ಮಧ್ಯ ಪ್ರವೇಶಿಸಿದ್ದಾರೆ. ಸದ್ಯ ಪ್ರಾಂಶುಪಾಲರ ನೇತೃತ್ವದಲ್ಲಿ ಕಾಲೇಜಿನಲ್ಲಿ ಸಭೆ ನಡೆದಿದ್ದು, ಬಳಿಕ ಪರಿಸ್ಥಿತಿ ಹತೋಟಿಗೆ ಬಂದಿದ್ದರೂ, ಬೂದಿ ಮುಚ್ಚಿದ ಕೆಂಡದಂತಾಗಿದೆ.