ಮಾಯಾಂಗನೆಯ ಮಾತಿನ ಮೋಡಿಗೆ ಮರುಳಾದ ಹನಿಟ್ರ್ಯಾಪ್ ಗೊಳಗಾದ ಉಪ ತಹಶೀಲ್ದಾರ್: ಆರೋಪಿಗಳು ಕಾಡಿದ್ದು ಅಷ್ಟಿಷ್ಟಲ್ಲ!
Monday, March 21, 2022
ಬೆಂಗಳೂರು: ಯುವತಿಯೋರ್ವಳಿಂದ ಬಂದಿರುವ ಫೇಸ್ಬುಕ್ ಫ್ರೆಂಡ್ ರಿಕ್ವೆಸ್ಟ್ ಸ್ವೀಕರಿಸಿರುವ ಉಪ ತಹಶೀಲ್ದಾರ್ವೊಬ್ಬರು ‘ಹನಿಟ್ರ್ಯಾಪ್’ಗೆ ಸಿಲುಕಿದ್ದಾರೆ. ಆಕೆ ಹೇಳಿದಂತೆ ಹೋಟೆಲ್ಗೆ ಹೋದ ಉಪ ತಹಶೀಲ್ದಾರ್ಗೆ ಪ್ರಜ್ಞೆತಪ್ಪುವ ಔಷಧಿ ಕೊಟ್ಟು ಅಶ್ಲೀಲ ವೀಡಿಯೋ ಚಿತ್ರೀಕರಿಸಿ ಭಾರೀ ಮೊತ್ತದ ಹಣಕ್ಕಾಗಿ ಬೇಡಿಕೆಯಿಟ್ಟಿದ್ದ ಆರೋಪಿಗಳನ್ನು ಕೆ.ಆರ್. ಪುರ ಪೊಲೀಸರು ಬಂಧಿಸಿದ್ದಾರೆ.
ಕೋಡಿಗೆಹಳ್ಳಿಯ ನಿವಾಸಿಗಳಾದ ಗಣಪತಿ ನಾಯಕ್, ಕಿಶನ್ ಹಾಗೂ ಕೇಶವ್ ಬಂಧಿತರು. ಪ್ರಕರಣದಲ್ಲಿ ಗದಗ ಮೂಲದ ಜ್ಯೋತಿ ವಿಶ್ವನಾಥ್ ತೋಪಗಿ ತಲೆಮರೆಸಿದ್ದಾಳೆ. ಪೊಲೀಸರು ಈಕೆಗಾಗಿ ಪೊಲೀಸರು ನಡೆಸುತ್ತಿದ್ದಾರೆ. ಹೊಸಕೋಟೆ ನಿವಾಸಿ ಕೋಲಾರ ಜಿಲ್ಲೆಯ ಉಪ ತಹಶೀಲ್ದಾರ್ ಗೌತಮ್ (40) ಹನಿಟ್ರ್ಯಾಪ್ಗೆ ಒಳಗಾದವರು.
2021ರ ಜುಲೈನಲ್ಲಿ ಉಪ ತಹಶೀಲ್ದಾರ್ ಕಂಟನಲ್ಲೂರು ಕ್ರಾಸ್ ಬಳಿಯ ಹೋಟೆಲ್ ಒಂದಕ್ಕೆ ಊಟ ಮಾಡಲು ಬಂದಿದ್ದರು. ಈ ಸಂದರ್ಭ ಆರೋಪಿತೆ ಜ್ಯೋತಿ ವಿಶ್ವನಾಥ್ ತೋಪಗಿ ತನ್ನನ್ನು ಅವರಿಗೆ ಪರಿಚಯ ಮಾಡಿಕೊಂಡಿದ್ದಳು. ಆಗ ಗೌತಮ್ ಮೊಬೈಲ್ ಸಂಖ್ಯೆ ಪಡೆದು, ಫೇಸ್ಬುಕ್ನಲ್ಲಿ ಫ್ರೆಂಡ್ ರಿಕ್ವೆಸ್ಟ್ ಕಳುಹಿಸಿದ್ದಳು. ಬಳಿಕ ಮೊಬೈಲ್ ವಾಟ್ಸ್ಆಪ್, ಮೆಸೆಂಜರ್ನಲ್ಲಿ ನಿರಂತರವಾಗಿ ಸಂದೇಶ ಕಳುಹಿಸುತ್ತಾ ಗೌತಮ್ ತನ್ನತ್ತ ಆಕರ್ಷಿತರಾಗುವಂತೆ ಮಾಡಿದ್ದಳು.
ಜ್ಯೋತಿಯ ಮೋಹಕ ಮಾತಿಗೆ ಮರುಳಾಗಿದ್ದ ಉಪ ತಹಶೀಲ್ದಾರ್ ಗೌತಮ್, ಆಕೆಯ ಮನವಿಯ ಮೇರೆಗೆ ಒಂದೆರಡು ಬಾರಿ ಹೋಟೆಲ್ನಲ್ಲಿ ಭೇಟಿಯಾಗಿ ಜೊತೆಗೆ ಊಟವನ್ನು ಮಾಡಿದ್ದರು. ಇದಾದ ಮೇಲೆ ಆರಂಭವಾಯಿತು ಆಕೆಯ ಅಸಲಿ ಮುಖ. ಕೆಲ ಸಮಯದ ಬಳಿಕ ಭಟ್ಟರಹಳ್ಳಿಯ ಹೋಟೆಲ್ವೊಂದಕ್ಕೆ ಗೌತಮ್ ಅವರನ್ನು ಕರೆಸಿಕೊಂಡಿದ್ದ ಜ್ಯೋತಿ, ಅದೇ ಬಿಲ್ಡಿಂಗ್ನ ಮೇಲ್ಭಾಗದ ರೂಂಗೆ ಕರೆದೊಯ್ದಿದ್ದಳು. ಅಲ್ಲಿ ಅಮಲಾಗುವ ಜ್ಯೂಸ್ ಕೊಟ್ಟಿದ್ದಳು. ಗೌತಮ್ ಜ್ಯೂಸ್ ಕುಡಿದ ಸ್ವಲ್ಪ ಹೊತ್ತಿನಲ್ಲಿ ಪ್ರಜ್ಞೆ ಕಳೆದುಕೊಂಡಿದ್ದಾರೆ. ಆಗ ಅವರ ಬಟ್ಟೆಬಿಚ್ಚಿ ಅವರೊಂದಿಗೆ ಖಾಸಗಿ ಕ್ಷಣಗಳನ್ನು ಕಳೆದಿರುವ ಫೋಟೊವನ್ನು ಜ್ಯೋತಿ ತನ್ನ ಮೊಬೈಲ್ನಲ್ಲಿ ವಿಡಿಯೋ ಮಾಡಿಕೊಂಡಿದ್ದರು. ಕೆಲ ಹೊತ್ತಿನ ಬಳಿಕ ಗೌತಮ್ಗೆ ಎಚ್ಚರವಾದಾಗ ಆತ ಅರೆನಗ್ನಾವಸ್ಥೆಯಲ್ಲಿದ್ದರು.
ಕಳೆದ ಫೆ.24ರಂದು ಕೋಲಾರದ ಎ.ಸಿ. ಕಚೇರಿಗೆ ಬಂದು ಗೌತಮ್ ಅವರನ್ನು ಭೇಟಿಯಾಗಿದ್ದ ಆರೋಪಿಗಳಾದ ಗಣಪತಿ ನಾಯಕ್, ರಮೇಶ್ಗೌಡ, ಸಂತೋಷ್ ತಮ್ಮನ್ನು ವಕೀಲರು ಎಂದು ಪರಿಚಯಿಸಿಕೊಂಡಿದ್ದರು. ಬಳಿಕ ಜ್ಯೋತಿ ಸೆರೆಹಿಡಿದಿದ್ದ ಅಶ್ಲೀಲ ವೀಡಿಯೋ ತೋರಿಸಿ, 25 ಲಕ್ಷ ರೂ.ಗೆ ಬೇಡಿಕೆಯಿಟ್ಟಿದ್ದರು. ಹಣ ಕೊಡದಿದ್ದರೆ ವೀಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡುವುದಾಗಿ ಬೆದರಿಕೆ ಒಡ್ಡಿದ್ದರು.
ಆರೋಪಿಗಳ ಬೆದರಿಕೆಗೆ ಗೌತಮ್ ಜಗ್ಗದಿದ್ದಾಗ, ಮಾ.10ರಂದು ಮತ್ತೆ ಆರೋಪಿ ಗಣಪತಿ ನಾಯಕ್ ತಾವಿದ್ದಲ್ಲಿಗೆ ಗೌತಮ್ ಅವರನ್ನು ಕರೆಸಿಕೊಂಡು ಮಾ.17ರೊಳಗೆ 10 ಲಕ್ಷ ರೂ. ಕೊಡುವಂತೆ ಬೆದರಿಸಿದ್ದ. ಇದರಿಂದ ಬೆದರಿದ ಗೌತಮ್ ಈ ಬಗ್ಗೆ ಕೆ.ಆರ್.ಪುರ ಪೊಲೀಸರಿಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಗೌತಮ್ ಮೂಲಕ ಆರೋಪಿಗಳಿಗೆ ಕರೆ ಮಾಡಿಸಿ, ಹಣ ಕೊಡುವುದಾಗಿ ಯಲಹಂಕದ ಕೊಡಿಗೇಹಳ್ಳಿ ಬಳಿ ಬರುವಂತೆ ಕರೆಸಿಕೊಂಡಿದ್ದರು.
ಆರೋಪಿಗಳು ಕಾರಿನಲ್ಲಿ ಬರುತ್ತಿದ್ದಂತೆ ಸಿವಿಲ್ ಧಿರಿಸಿನಲ್ಲಿದ್ದ ಪೊಲೀಸರು ಕಾರು ಸುತ್ತುವರಿದು ಬಂಧಿಸಲು ಮುಂದಾಗಿದ್ದರು. ಆದರೆ ಅಷ್ಟೊತ್ತಿಗಾಗಲೇ ಆರೋಪಿಗಳು ಪರಾರಿಯಾಗಿದ್ದರು. ಇತ್ತೀಚಿಗೆ ಸಾಮಾಜಿಕ ಜಾಲತಾಣದಲ್ಲಿ ಜನಪ್ರಿಯರಾಗಿರುವ ವಕೀಲರೊಬ್ಬರು ಗೌತಮ್ಗೆ ಕರೆ ಮಾಡಿ ‘ಹಣ ಕೊಡಲು ಹೇಳಿದರೆ ರೌಡಿಗಳನ್ನು ಕರೆಸುತ್ತೀಯಾ?’ ಎಂದು ಬೆದರಿಕೆ ಒಡ್ಡಿದ್ದರು. ಈ ಬಗ್ಗೆ ಗೌತಮ್ ಪೊಲೀಸರಿಗೆ ದೂರು ನೀಡಿದ್ದರು. ಪೊಲೀಸರು ಆ ವಕೀಲರನ್ನು ಠಾಣೆಗೆ ಕರೆಸಿ ವಿಚಾರಣೆ ನಡೆಸಿದಾಗ, ಆರೋಪಿಗಳನ್ನು ತಮ್ಮ ಕಚೇರಿಯಲ್ಲೇ ಬಚ್ಚಿಟ್ಟುಕೊಂಡಿರುವುದಾಗಿ ಬಾಯಿಬಿಟ್ಟಿದ್ದಾರೆ.
ತಕ್ಷಣ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ಆರೋಪಿಗಳು ಸಾಮಾಜಿಕ ಜಾಲತಾಣದಲ್ಲಿ ಜನಪ್ರಿಯರಾಗಿರುವ ವಕೀಲರೊಬ್ಬರ ಸಹಚರರು ಎಂಬುದು ಗೊತ್ತಾಗಿದೆ. ದೂರುದಾರರು ಬ್ಲ್ಯಾಕ್ಮೇಲ್ನಿಂದ ಆತಂಕಗೊಂಡು ಆರೋಪಿಗಳಿಗೆ ಈ ಹಿಂದೆ 5 ಲಕ್ಷ ರೂ. ನೀಡಿದ್ದರು ಎನ್ನಲಾಗಿದೆ. ಹನಿಟ್ರ್ಯಾಪ್ ಕೇಸ್ನಲ್ಲಿ ಆ ಜನಪ್ರಿಯ ವಕೀಲರ ಪಾತ್ರವೇನು? ಎಂಬುದು ತನಿಖೆಯಿಂದ ಬೆಳಕಿಗೆ ಬರಬೇಕಿದೆ. ಆರೋಪಿಗಳನ್ನು 10 ದಿನ ವಶಕ್ಕೆ ಪಡೆದಿರುವ ಪೊಲೀಸರು ಇದೇ ಮಾದರಿಯಲ್ಲಿ ಈ ಹಿಂದೆ ಎಷ್ಟು ಜನರಿಗೆ ಹನಿಟ್ರ್ಯಾಪ್ ಮಾಡಿದ್ದಾರೆ? ಎಂಬುದರ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.