trouble to IPS officer- ಸಿಂಘಂ ಖ್ಯಾತಿಯ ಚನ್ನಣ್ಣನವರ್ ವಿರುದ್ಧ CBI ತನಿಖೆ: ಹೈಕೋರ್ಟ್‌ಗೆ ವಕೀಲರ ಅರ್ಜಿ
ಸಿಂಘಂ ಖ್ಯಾತಿಯ ಚನ್ನಣ್ಣನವರ್ ವಿರುದ್ಧ CBI ತನಿಖೆ: ಹೈಕೋರ್ಟ್‌ಗೆ ವಕೀಲರ ಅರ್ಜಿ
IPS ಅಧಿಕಾರಿ ರವಿ ಡಿ. ಚೆನ್ನಣ್ಣವರ್ ವಿರುದ್ಧ ಅಕ್ರಮ ಆಸ್ತಿ ಗಳಿಕೆ ಆರೋಪದಡಿ ದೂರು ದಾಖಲಿಸಿ ತನಿಖೆ ನಡೆಸಲು CBI ಅಥವಾ ಜಾರಿ EDಗೆ ನಿರ್ದೇಶಿಸುವಂತೆ ಕೋರಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿದೆ.
ಕೆ.ಎನ್ ಜಗದೀಶ್ ಕುಮಾರ್ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದಾರೆ. ಅರ್ಜಿಯಲ್ಲಿ, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ, ಕೇಂದ್ರ ಗೃಹ ಸಚಿವಾಲಯದ ಪ್ರಧಾನ ಕಾರ್ಯದರ್ಶಿ, ಸಿಬಿಐ, ಇಡಿ ಮತ್ತು ರವಿ ಡಿ. ಚನ್ನಣ್ಣವರ್ ಅವರನ್ನು ಅರ್ಜಿಯಲ್ಲಿ ಪ್ರತಿವಾದಿಗಳನ್ನಾಗಿ ನಮೂದಿಸಲಾಗಿದೆ.
ಚನ್ನಣ್ಣವರ್ ಅಕ್ರಮವಾಗಿ ಸಂಪಾದಿಸಿದ್ದಾರೆ ಎನ್ನಲಾದ ಆಸ್ತಿಗಳ ಮಾಹಿತಿ ಮತ್ತು ದಾಖಲೆಗಳನ್ನು ಅರ್ಜಿಯಲ್ಲಿ ಲಗತ್ತಿಸಲಾಗಿದೆ. ಅರ್ಜಿ ಇನ್ನಷ್ಟೇ ವಿಚಾರಣೆಗೆ ನಿಗದಿಯಾಗಬೇಕಿದೆ.
ಅರ್ಜಿ ಸಾರಾಂಶ
2008ರಲ್ಲಿ ಕೇಂದ್ರ ನಾಗರಿಕ ಸೇವೆ ಪರೀಕ್ಷೆ ಪಾಸು ಮಾಡಿರುವ ರವಿ ದ್ಯಾಮಪ್ಪ ಚೆನ್ನಣ್ಣವರ್ IPS ಅಧಿಕಾರಿಯಾಗಿ 13 ವರ್ಷಗಳ ಕಾಲ ರಾಜ್ಯದಲ್ಲಿ ಸೇವೆ ಸಲ್ಲಿಸಿದ್ದು, ಅತ್ಯಂತ ಪ್ರಾಮಾಣಿಕ ಅಧಿಕಾರಿ ಎಂಬಂತೆ ಬಿಂಬಿಸಿಕೊಂಡಿದ್ದಾರೆ.
ಕರ್ನಾಟಕದ ಸಿಂಗಂ ಎಂದೇ ಜನಪ್ರಿಯರಾಗಿರುವ ಈ ಅಧಿಕಾರಿ ಅತ್ಯಂತ ಭ್ರಷ್ಟರಾಗಿದ್ದು, ಕುಟುಂಬ ಸದಸ್ಯರು, ಸಂಬಂಧಿಕರು ಹಾಗೂ ಆಪ್ತರ ಹೆಸರಿನಲ್ಲಿ ಅಕ್ರಮ ಆಸ್ತಿ ಮಾಡಿದ್ದಾರೆ ಎಂದು ಅರ್ಜಿದಾರರು ದೂರಿದ್ದಾರೆ.
ಎಕರೆಗಟ್ಟಲೆ ಬೇನಾಮಿ ಜಮೀನು, ತಾಯಿ ಹೆಸರಿನಲ್ಲಿ ಖಾಸಗಿ ಸಂಸ್ಥೆಯೊಂದರ ಪಾಲುದಾರಿಕೆಯಲ್ಲಿ ಕ್ವಾರಿ ಗುತ್ತಿಗೆ ಪಡೆದಿದ್ದಾರೆ. ಈ ಸಂಸ್ಥೆಯಲ್ಲಿ ಕೋಟ್ಯಂತರ ರೂ. ಬಂಡವಾಳ ಹೂಡಿದ್ದಾರೆ. ಅಕ್ರಮವಾಗಿ ಆಸ್ತಿ ಗಳಿಸಲು ತಮ್ಮ ಹುದ್ದೆ, ಅಧಿಕಾರ ಹಾಗೂ ಪ್ರಭಾವವನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಅರ್ಜಿಯಲ್ಲಿ ಹೇಳಲಾಗಿದೆ.
ಸುದ್ದಿ ಮಾಧ್ಯಮಗಳು ಈ ಬಗ್ಗೆ ವರದಿ ಮಾಡದಂತೆ ನ್ಯಾಯಾಲಯದಿಂದ ನಿರ್ಬಂಧಕಾಜ್ಞೆ ಪಡೆದಿದ್ದಾರೆ. ಸರ್ಕಾರವೂ ಈ ಅಧಿಕಾರಿ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ. ಆದ್ದರಿಂದ, ರವಿ ಡಿ. ಚನ್ನಣ್ಣವರ್ ಅಕ್ರಮ ಆಸ್ತಿ ತನಿಖೆ ಮಾಡಲು CBI ಅಥವಾ ಜಾರಿ EDಗೆ ನಿರ್ದೇಶಿಸಬೇಕು. ಅಧಿಕಾರಿಯನ್ನು ಸೇವೆಯಿಂದ ಅಮಾನತು ಮಾಡಲು ಸರ್ಕಾರಕ್ಕೆ ನಿರ್ದೇಶಿಸಬೇಕು ಎಂದು ಅರ್ಜಿದಾರರು ಮನವಿ ಮಾಡಿದ್ದಾರೆ.