
ಕುಕ್ಕೆ ಸುಬ್ರಹ್ಮಣ್ಯದಲ್ಲಿ ಕಂಡು ಬಂದಿತು ಭಾರೀ ಗಾತ್ರದ ಕಾಳಿಂಗ ಸರ್ಪ!
Wednesday, March 9, 2022
ಸುಬ್ರಹ್ಮಣ್ಯ: ದಕ್ಷಿಣ ಕನ್ನಡ ಜಿಲ್ಲೆಯ ಪ್ರಖ್ಯಾತ ನಾಗಕ್ಷೇತ್ರ ಶ್ರೀ ಕುಕ್ಕೆ ಸುಬ್ರಹ್ಮಣ್ಯದ ಸಮೀಪ ಹರಿಹರ ಗ್ರಾಮದಲ್ಲಿ ಭಾರೀ ಗಾತ್ರದ ಕಾಳಿಂಗ ಸರ್ಪವೊಂದು ಪತ್ತೆಯಾಗಿದೆ. ಸುಮಾರು 10 ಅಡಿ ಉದ್ದದ ಕಾಳಿಂಗ ಸರ್ಪವೊಂದು ಕಲ್ಮಕಾರು ಗ್ರಾಮದ ರಾಧಾಕೃಷ್ಣರವರ ಮನೆಯಲ್ಲಿ ಕಾಣಿಸಿಕೊಂಡಿತ್ತು.
ರಾಧಾಕೃಷ್ಣರವರ ಮನೆ ಅರಣ್ಯ ಪರಿಸರದಲ್ಲಿದೆ. ಅವರ ಮನೆಯ ಪಾತ್ರೆ ತೊಳೆಯುವ ಸಿಂಕ್ ನಲ್ಲಿದ್ದ ಕಾಳಿಂಗ ಸರ್ಪವನ್ನು ನೋಡಿ ಒಮ್ಮೆಗೆ ಎಲ್ಲರೂ ದಿಗ್ಭ್ರಾಂತರಾಗಿದ್ದಾರೆ. ಕಾಳಿಂಗ ಸರ್ಪದ ಗಾತ್ರವನ್ನು ಕಂಡು ಸ್ಥಳೀಯರು ಭಯಭೀತರಾಗಿದ್ದಾರೆ.
ಈ ಹಿನ್ನೆಲೆಯಲ್ಲಿ ಕಾಳಿಂಗ ಸರ್ಪವನ್ನು ಸೆರೆ ಹಿಡಿಯಲು ಕೊಡಗು ಜಿಲ್ಲೆಯ ಉರಗ ರಕ್ಷಕ ಸ್ನೇಕ್ ಪ್ರವೀಣ್ ಶೆಟ್ಟಿಯನ್ನು ಕರೆಸಲಾಯಿತು. ಅವರು ಬಂದು ಸರ್ಪವನ್ನು ಸುರಕ್ಷಿತವಾಗಿ ಹಿಡಿದು ಬಿಸಿಲೇ ಘಾಟ್ ಅರಣ್ಯಕ್ಕೆ ಅರಣ್ಯ ಇಲಾಖೆಯ ಸಿಬ್ಬಂದಿ ಸಮ್ಮುಖದಲ್ಲಿ ಬಿಟ್ಟು ಬಂದಿದ್ದಾರೆ.