
'ಲಾಕಪ್' ರಿಯಾಲಿಟಿ ಶೋನಲ್ಲಿ ಮಾಜಿ ಪತಿಯ ಕರಾಳಮುಖವನ್ನು ಬಿಚ್ವಿಟ್ಟ ಪೂನಂ ಪಾಂಡೆ
Wednesday, March 2, 2022
ಮುಂಬೈ: ಬಾಲಿವುಡ್ ನಟಿ ಕಂಗನಾ ರಣಾವತ್ ನಡೆಸಿಕೊಡುತ್ತಿರುವ “ಲಾಕಪ್” ರಿಯಾಲಿಟಿ ಶೋ ಫೆ. 27ರಿಂದ ಪ್ರಾರಂಭವಾಗಿದೆ. ಒಟ್ಟು 16 ಸೆಲೆಬ್ರಿಟಿ ಸ್ಪರ್ಧಿಗಳು ಲಾಕಪ್ನಲ್ಲಿ 72 ದಿನಗಳ ಕಾಲ ಬಂಧಿಸಲಾಗುತ್ತದೆ. ಇದೇ ಈ ಶೋ ತಿರುಳು.
"ಲಾಕಪ್'' ಶೋವನ್ನು ಎಕ್ತಾ ಕಪೂರ್ ನಿರ್ಮಾಣ ಮಾಡುತ್ತಿದ್ದಾರೆ. ಈ ಶೋ ಆಲ್ಟ್ ಬಾಲಾಜಿ ಮತ್ತು ಎಂಎಕ್ಸ್ ಪ್ಲೇಯರ್ನಲ್ಲಿ 24X7 ಪ್ರಸಾರವಾಗುತ್ತಿದೆ. ಈ ಶೋನಲ್ಲಿ ಕೇವಲ ವಿವಾದಿತ ಸೆಲೆಬ್ರಿಟಿಗಳನ್ನೇ ಆಯ್ಕೆ ಮಾಡಿಕೊಳ್ಳಲಾಗಿದೆ. ಈ ಕಾರ್ಯಕ್ರಮ ನಡೆಸಿಕೊಡುವ ಕಂಗನಾ ರಣಾವತ್ ಕೂಡ ವಿವಾದಗಳಿಂದ ಹೊರತಾಗಿಲ್ಲ. ಕಾರ್ಯಕ್ರಮ ಆರಂಭವಾದ ಎರಡೇ ದಿನದಲ್ಲಿ ಲಾಕಪ್ ಭಾರೀ ಸದ್ದು ಮಾಡುತ್ತಿದೆ.
ಈ ಶೋನಲ್ಲಿ ಸ್ಪರ್ಧಿಯಾಗಿರುವ ಮಾಡಲ್ ಹಾಗೂ ನಟಿ ಪೂನಂ ಪಾಂಡೆ ತಮ್ಮ ವೈವಾಹಿಕ ಜೀವನದ ಬಗ್ಗೆ ಸ್ಪೋಟಕ ಮಾಹಿತಿಯನ್ನು ಬಿಚ್ಚಿಟ್ಟಿದ್ದಾರೆ. ತಮ್ಮ ಸಹ ಸ್ಪರ್ಧಿ ಕಾರನ್ವೀರ್ ಬೋಹ್ರಾ ಹಾಗೂ ಪಾಯಲ್ ರೋಹಟಗಿಯರೊಂದಿಗೆ ಮಾತನಾಡುತ್ತ ತಮ್ಮ ಮಾಜಿ ಪತಿ ಸ್ಯಾಮ್ ಬಾಂಬೆ ಬಗ್ಗೆ ಪೂನಂ ಬೇಸರ ವ್ಯಕ್ತಪಡಿಸಿದ್ದಾರೆ. ಆದರೂ ಆತನನ್ನು ತಾನು ದ್ವೇಷಿಸುವುದಿಲ್ಲ ಎಂದು ಹೇಳಿದ್ದಾರೆ.
ನಮ್ಮ ದೊಡ್ಡ ಮನೆಯಲ್ಲಿ ನಾಲ್ಕು ಅಂತಸ್ತುಗಳಿವೆ. ಆದರೆ, ಸ್ಯಾಮ್ ನನ್ನನ್ನು ಬೇರೆ ಕೋಣೆಯಲ್ಲಿ ಇರಲು ಬಿಡುತ್ತಿರಲಿಲ್ಲ. ಬದಲಾಗಿ ತಾನಿದ್ದ ಕೋಣೆಯಲ್ಲಿ ಉಳಿಯುವಂತೆ ಬಲವಂತ ಮಾಡುತ್ತಿದ್ದ. ನನ್ನನ್ನು ಮನೆಯೊಳಗಡೆ ಫೋನ್ ಉಪಯೋಗಿಸಲು ಬಿಡುತ್ತಿರಲಿಲ್ಲ. ಅಲ್ಲದೆ ಆತ ತನ್ನ ಮೇಲೆ ನಿರಂತರವಾಗಿ ಹಲ್ಲೆ ಮಾಡುತ್ತಿದ್ದ. ಅದರಲ್ಲೂ ತಲೆಯ ಒಂದೇ ಭಾಗಕ್ಕೆ ಹೆಚ್ಚು ಥಳಿಸುತ್ತಿದ್ದ. ಇದರಿಂದ ನನಗೆ ಮೆದುಳಿನ ರಕ್ತಸ್ರಾವ ಆಗಿದೆ. ಬೆಳಗ್ಗೆ 10 ಗಂಟೆಗೆ ಕುಡಿಯಲು ಆರಂಭಿಸಿದರೆ ಆತ ಮಧ್ಯರಾತ್ರಿಯವರೆಗೂ ಕುಡಿಯುವುದನ್ನು ನಿಲ್ಲಿಸುತ್ತಿರಲಿಲ್ಲ ಎಂದು ಮಾಜಿ ಪತಿಯೊಂದಿಗೆ ಕಳೆದ ಕರಾಳ ಕ್ಷಣಗಳನ್ನು ಪೂನಂ ಮೆಲುಕು ಹಾಕಿದ್ದಾರೆ.
ಬಹುಕಾಲದ ಗೆಳೆಯ ಹಾಗೂ ನಿರ್ಮಾಪಕ ಸ್ಯಾಮ್ ಬಾಂಬೆಯನ್ನು 2020ರ ಸೆಪ್ಟೆಂಬರ್ನಲ್ಲಿ ಪೂನಂ ಪಾಂಡೆ ವಿವಾಹವಾಗಿದ್ದರು. ಮದುವೆಯಾದ ಕೆಲವೇ ದಿನಗಳಲ್ಲಿ ಪತಿಯಿಂದ ಹಲ್ಲೆಗೊಳಗಾಗಿ ಸಾಕಷ್ಟು ಬಾರಿ ಪೂನಂ ಕೋರ್ಟ್ ಮೆಟ್ಟಿಲೇರಿದ್ದಾರೆ. 2021ರ ನವೆಂಬರ್ನಲ್ಲಿ ಪೂನಂ ಆಸ್ಪತ್ರೆಗೆ ದಾಖಲಾದ ಸಮಯದಲ್ಲಿ ಸ್ಯಾಮ್ನನ್ನು ಮುಂಬೈ ಪೊಲೀಸರು ಬಂಧಿಸಿದ್ದರು.