-->
Mangaluru Court- ಕೋರ್ಟಿಗೆ ತಪ್ಪು ಮಾಹಿತಿ, ಉಡಾಫೆ ಉತ್ತರ: ಮಂಗಳೂರು ತಹಶೀಲ್ದಾರ್‌ಗೆ ನ್ಯಾಯಾಲಯ ಛೀಮಾರಿ

Mangaluru Court- ಕೋರ್ಟಿಗೆ ತಪ್ಪು ಮಾಹಿತಿ, ಉಡಾಫೆ ಉತ್ತರ: ಮಂಗಳೂರು ತಹಶೀಲ್ದಾರ್‌ಗೆ ನ್ಯಾಯಾಲಯ ಛೀಮಾರಿ

ನ್ಯಾಯಾಲಯಕ್ಕೆ ತಪ್ಪು ಮಾಹಿತಿ, ಉಡಾಫೆ ಉತ್ತರ: ಮಂಗಳೂರು ತಹಶೀಲ್ದಾರ್‌ಗೆ ನ್ಯಾಯಾಲಯ ಛೀಮಾರಿ


ಸಾಂದರ್ಭಿಕ ಚಿತ್ರ



ಮಂಗಳೂರು ತಹಶೀಲ್ದಾರ್ ಪುರಂದರ ಹೆಗ್ಡೆ ಅವರನ್ನು ಮಂಗಳೂರು ಒಂದನೇ ಹೆಚ್ಚುವರಿ ಪ್ರಧಾನ ಕೌಟುಂಬಿಕ ನ್ಯಾಯಾಲಯದ ಮಾನ್ಯ ನ್ಯಾಯಾಧೀಶರು ಹಿಗ್ಗಾಮುಗ್ಗಾ ಝಾಡಿಸಿದ್ದಾರೆ. ನ್ಯಾಯಾಲಯದ ಮನವಿಗೆ ಬೇಜವಾಬ್ದಾರಿಯಾಗಿ ಸ್ಪಂದಿಸಿರುವ ತಹಶೀಲ್ದಾರ್ ಮತ್ತವರ ಸಿಬ್ಬಂದಿಯನ್ನು 'ಬಹಿರಂಗ ನ್ಯಾಯಾಲಯ'ದಲ್ಲಿ ಛೀಮಾರಿ ಹಾಕಿದ್ದಾರೆ.



"ನ್ಯಾಯಾಲಯಕ್ಕೆ ಈ ರೀತಿ ಉಡಾಫೆ, ಬೇಜವಾಬ್ದಾರಿಯಾಗಿ ಸ್ಪಂದಿಸುವ ನೀವು ಇನ್ನು ನಿಮ್ಮ ಕಚೇರಿಗೆ ಅರ್ಜಿ ಹಿಡಿದುಕೊಂಡು ಬರುವ ಜನರಿಗೆ ಹೇಗೆ ಸ್ಪಂದಿಸುತ್ತೀರಿ... ಅರ್ಜಿಯ ಜೊತೆಗೆ ನೋಟಿನ ಕಂತೆ ನೀಡಿದರೆ ಮಾತ್ರ ಕೆಲಸ ಮಾಡುತ್ತೀರಿ..? ನಿಮ್ಮ ಬಗ್ಗೆ ಜನ ಬೇಸತ್ತು ಹೋಗುತ್ತಾರೆ. ನಿಮ್ಮ ಕಾರ್ಯನಿರ್ವಹಣೆ ಬಗ್ಗೆ ನಮಗೂ ತುಂಬ ಬೇಸರವಾಗಿದೆ" ಎಂದು ಮಾನ್ಯ ನ್ಯಾಯಾಧೀಶರಾದ ಮಂಜುಳಾ ಇಟ್ಟಿ ಓಪನ್ ಕೋರ್ಟ್‌ನಲ್ಲಿ ಹೇಳಿದರು.



ಆರೋಪಿಯ ಜಾಮೀನು ವೇಳೆ ಶೂರಿಟಿಯಾಗಿದ್ದ ವ್ಯಕ್ತಿಯೊಬ್ಬರ ಆಸ್ತಿ ವಿಚಾರವಾಗಿ ಮಂಗಳೂರು ತಹಶೀಲ್ದಾರ್ ಕಚೇರಿ ಉಡಾಫೆಯ ಉತ್ತರ ನೀಡಿತ್ತು. ಹಲವು ಬಾರಿ ಮನವಿ ರೂಪದ ನೋಟೀಸ್‌ಗೆ ಯಾವುದೇ ಸ್ಪಷ್ಟ ಉತ್ತರ ನೀಡದ ತಹಶೀಲ್ದಾರ್ ಕಚೇರಿ ಸಿಬ್ಬಂದಿ ಈ ಬಗ್ಗೆ ತಪ್ಪು ಮಾಹಿತಿಯನ್ನು ನೀಡಿ ನ್ಯಾಯಾಲಯದ ದಿಕ್ಕು ತಪ್ಪಿಸಿದ್ದರು.




ಹಲವು ಬಾರಿ ಸಮ್ಮನ್ ಮಾಡಿದರೂ ತಹಶೀಲ್ದಾರ್ ನ್ಯಾಯಾಲಯಕ್ಕೆ ಹಾಜರಾಗಿರಲಿಲ್ಲ. ಮಂಗಳವಾರ (16-03-2022)ರಂದು ಮಂಗಳೂರು ತಹಶೀಲ್ದಾರ್ ಪುರಂದರ ಹೆಗ್ಡೆ ಖುದ್ದು ಹಾಜರಾಗಿದ್ದರು.



ಆಗ ತಹಶೀಲ್ದಾರ್ ಅವರನ್ನು ತರಾಟೆಗೆ ತೆಗೆದುಕೊಂಡ ಮಾನ್ಯ ನ್ಯಾಯಾಧೀಶರಾದ ಮಂಜುಳಾ ಇಟ್ಟಿ ಅವರು, ನ್ಯಾಯಾಲಯದ ದಾರಿ ತಪ್ಪಿಸಿದ್ದು ಮತ್ತು ಸುಳ್ಳು ಮಾಹಿತಿ ನೀಡಿರುವ ಬಗ್ಗೆ ತಹಶೀಲ್ದಾರ್ ಅವರಿಂದ ಸ್ಪಷ್ಟೀಕರಣ ಕೇಳಿದರು.



ಇದಕ್ಕೆ ತಹಶೀಲ್ದಾರ್ ಅವರು ಸ್ಪಷ್ಟವಾಗಿ ಉತ್ತರಿಸದೆ ತಬ್ಬಿಬ್ಬಾದರು. ಹಲವು ಬಾರಿ ಸಮ್ಮನ್ಸ್ ಮಾಡಿದರೂ ನ್ಯಾಯಾಲಯಕ್ಕೆ ಹಾಜರಾಗದ ಬಗ್ಗೆ 'ಒಂದು ದಿನ'ದ ಅವಧಿಯಲ್ಲಿ ನ್ಯಾಯಾಲಯಕ್ಕೆ ಸಮಾಧಾನಕರ ಉತ್ತರ ನೀಡುವಂತೆ ನ್ಯಾಯಾಧೀಶರು ತಾಕೀತು ಮಾಡಿದರು. ಹಾಗೂ ನ್ಯಾಯಾಲಯ ಕೇಳಿದ ಆಸ್ತಿಯ ಸ್ಪಷ್ಟ ವಿವರವನ್ನು ನೀಡುವಂತೆ ತಹಶೀಲ್ದಾರ್ ಅವರಿಗೆ ನಿರ್ದೇಶಿಸಿದರು. ಜೊತೆಗೆ ಮಾನ್ಯ ನ್ಯಾಯಾಲಯದ ಸಮಯವನ್ನು ವ್ಯರ್ಥ ಮಾಡಿರುವ ಬಗ್ಗೆ ತಹಶೀಲ್ದಾರ್ ಅವರನ್ನು ನ್ಯಾಯಾಧೀಶರು ತರಾಟೆಗೆ ತೆಗೆದುಕೊಂಡರು.



ಘಟನೆಯ ವಿವರ:

ವಿಶೇಷ ಪೋಕ್ಸೋ ನ್ಯಾಯಾಲಯದ ಪ್ರಭಾರ ಜವಾಬ್ದಾರಿ ಹೊಂದಿರುವ ಒಂದನೇ ಹೆಚ್ಚುವರಿ ಪ್ರಧಾನ ಕೌಟುಂಬಿಕ ನ್ಯಾಯಾಲಯದಲ್ಲಿ ಪೋಕ್ಸೋ ಪ್ರಕರಣವೊಂದರ ಆರೋಪಿ ವಿಚಾರಣೆಗೆ ಸತತವಾಗಿ ಗೈರು ಹಾಜರಾಗಿದ್ದರು. ಈ ಪ್ರಕರಣದಲ್ಲಿ ಆರೋಪಿಗೆ ಜಾಮೀನುರಹಿತ ಬಂಧನ ಆದೇಶ ನೀಡಿದ ನ್ಯಾಯಾಧೀಶರು ಆರೋಪಿಯ ಶೂರಿಟಿಯನ್ನು ರದ್ದುಗೊಳಿಸಿದ್ದರು. ಆ ವ್ಯಕ್ತಿ ತಾನು ಶೂರಿಟಿಯಾಗಿ ಇಟ್ಟಿದ್ದ ಆಸ್ತಿಯನ್ನು ಮುಟ್ಟುಗೋಲು ಹಾಕುವ ಪ್ರಕ್ರಿಯೆಯನ್ನು ನ್ಯಾಯಾಧೀಶರು ಆರಂಭಿಸಿದ್ದರು.



ಈ ಹಿನ್ನೆಲೆಯಲ್ಲಿ ತಹಶೀಲ್ದಾರ್‌ ಕಚೇರಿಗೆ ಶೂರಿಟಿಯಾಗಿ ಇಟ್ಟಿದ್ದ ಆಸ್ತಿಯ ವಿವರ ನೀಡುವಂತೆ ಮಾಹಿತಿ ಕೋರಲಾಗಿತ್ತು. ಇದಕ್ಕೆ ತಹಶೀಲ್ದಾರ್ ಕಚೇರಿಯಿಂದ ಪ್ರತಿಕ್ರಿಯೆ ನೀಡಿ, ನ್ಯಾಯಾಲಯ ನಿರ್ದಿಷ್ಟವಾಗಿ ಮಾಹಿತಿ ಕೋರಿದ ಆಸ್ತಿ ಶೂರಿಟಿಯಾಗಿ ನಿಂತ ವ್ಯಕ್ತಿಗೆ ಸೇರಿಲ್ಲ ಎಂಬ ಉತ್ತರ ನೀಡಲಾಗಿತ್ತು. 


ಈ ಪ್ರತಿಕ್ರಿಯೆಯಿಂದ ಮತ್ತಷ್ಟು ಮಾಹಿತಿ ಬಯಸಿದ ನ್ಯಾಯಾಲಯ, ಹಾಗಾದರೆ, ಶೂರಿಟಿಯಾಗಿ ಇಟ್ಟಿರುವ ಆಸ್ತಿ ಯಾರ ಹೆಸರಿನಲ್ಲಿ ಇದೆ ಎಂಬ ಮಾಹಿತಿಯನ್ನು ಕೇಳಿತು. ಇದಕ್ಕೆ ತಹಶೀಲ್ದಾರ್ ಅವರಿಂದ ಯಾವುದೇ ಉತ್ತರ ಬಂದಿರಲಿಲ್ಲ.



ಈ ಬಗ್ಗೆ ಖುದ್ದು ಹಾಜರಾಗಿ ಸ್ಪಷ್ಟೀಕರಣ ನೀಡುವಂತೆ ಮಾನ್ಯ ನ್ಯಾಯಾಲಯವು ತಹಶೀಲ್ದಾರ್ ಅವರಿಗೆ ಆದೇಶ ನೀಡಿತ್ತು. ಪ್ರಕರಣದ ವಿಚಾರಣೆ ದಿನದಂದು ತಹಶೀಲ್ದಾರ್ ಹಲವು ಬಾರಿ ಹಾಜರಾಗದೆ ತಪ್ಪಿಸಿಕೊಂಡಿದ್ದರು.



ಶೂರಿಟಿಯವರೇ ನ್ಯಾಯಾಲಯದ ದಾರಿ ತಪ್ಪಿಸಿದರೇ...? ಫೋರ್ಜರಿ ಮಾಡಿ ನ್ಯಾಯಾಲಯದ ಮುಂದೆ ನಕಲಿ ದಾಖಲೆ ಇಟ್ಟಿದ್ದರೇ..? ಎಂಬ ಪ್ರಶ್ನೆ ನ್ಯಾಯಾಲಯಕ್ಕೆ ಎದುರಾಗಿತ್ತು. ಶೂರಿಟಿಯಾಗಿದ್ದ ವ್ಯಕ್ತಿಗೆ 'ಬಂಧನದ ಭೀತಿ'ಯ ಜೊತೆಗೆ ನ್ಯಾಯಾಲಯಕ್ಕೆ 'ವಂಚನೆ' ಮಾಡಿದ ಆರೋಪವೂ ಎದುರಾಗಿತ್ತು. ಆದರೆ, ಶೂರಿಟಿ ಪರವಾಗಿ ವಾದಿಸಿದ ವಕೀಲರು ಅಸಲಿ ದಾಖಲೆಯನ್ನು ನ್ಯಾಯಾಲಯದ ಮುಂದೆ ಇಟ್ಟು ತಹಶೀಲ್ದಾರ್ ಮತ್ತು ಅವರ ಕಚೇರಿ ಸಿಬ್ಬಂದಿಯ ಉಡಾಫೆ ಮತ್ತು ಬೇಜವಾಬ್ದಾರಿಯನ್ನು ಬಯಲಿಗೆಳೆದಿದ್ದರು.



ತಹಶೀಲ್ದಾರ್ ಮತ್ತವರ ಕಚೇರಿ ಮಾಡಿದ ತಪ್ಪಿನಿಂದ ವ್ಯಕ್ತಿಯೊಬ್ಬರು ಅನಗತ್ಯವಾಗಿ ಬಂಧನಕ್ಕೊಳಗಾಗುವುದು ತಪ್ಪಿದಂತಾಯಿತು!



Ads on article

Advertise in articles 1

advertising articles 2

Advertise under the article