ಮದ್ಯದ ಮತ್ತಲ್ಲಿ ಆಡಿದ ಮಾತೇ ವ್ಯಕ್ತಿಯ ಪ್ರಾಣಕ್ಕೆ ಕುತ್ತಾಯಿತು: ಪ್ರಕರಣ ದಾಖಲಾದ ಆರೇ ಗಂಟೆಗಳಲ್ಲಿ ಆರೋಪಿಗಳು ಅಂದರ್
Wednesday, March 16, 2022
ಬೆಂಗಳೂರು: ಮದ್ಯದ ಮತ್ತಿನಲ್ಲಿ ಆಡಿರುವ ಮಾತೇ ವ್ಯಕ್ತಿಯೋರ್ವರ ಪ್ರಾಣಕ್ಕೆ ಕುತ್ತಾಗಿದೆ. ಕೊಲೆಗೈದಿರುವ ಆರೋಪಿಗಳನ್ನು ಪ್ರಕರಣದ ದಾಖಲಾದ ಆರೇ ಗಂಟೆಗಳಲ್ಲಿ ಪೊಲೀಸರು ಬಂಧಿಸಿದ್ದಾರೆ.
ಮಂಜುನಾಥ್ ಕೊಲೆಯಾದ ಆಟೋ ಚಾಲಕ, ಮಧುಸೂದನ್ ಮತ್ತು ಯತೀಶ್ ಗೌಡ ಕೊಲೆಗೈದಿರುವ ಆರೋಪಿಗಳು.
ನಗರದ ಜೀವನ್ಬಿಮಾ ನಗರದಲ್ಲಿ ಮೊನ್ನೆ ರಾತ್ರಿ ಬಾರ್ವೊಂದಕ್ಕೆ ತೆರಳಿದ್ದ ಮಂಜುನಾಥ್ ಮದ್ಯಪಾನ ಮಾಡಿ ಪಾನಮತ್ತನಾಗಿ ಹೊರಬಂದಿದ್ದ. ಆಗ ಹೊರಗಡೆ ಇದ್ದ ಆಟೋವೊಂದನ್ನು ಏರಿದ್ದ. ಆಗ ಆಟೋದಲ್ಲಿದ್ದ ಮಧುಸೂದನ್ ಮತ್ತು ಯತೀಶ್ ಗೌಡ ಆತನನ್ನು ಆಟೋದಿಂದ ಇಳಿಯುವಂತೆ ಹೇಳಿದ್ದರು. ಆದರೆ ಮಂಜುನಾಥ್ ಮದ್ಯದ ಅಮಲಿನಲ್ಲಿ ಅವರನ್ನು ಕೆಟ್ಟದಾಗಿ ಬೈದಿದ್ದ.
ಇದರಿಂದ ಕೆರಳಿದ ಅವರಿಬ್ಬರು ಈತನಿಗೆ ಸರಿಯಾಗಿ ಥಳಿಸಿದ್ದಾರೆ. ಆಗ ಬಾರ್ ಸಿಬ್ಬಂದಿ ಮತ್ತು ಸಾರ್ವಜನಿಕರು ಈ ಜಗಳವನ್ನು ಬಿಡಿಸಿ ಕಳಿಸಿದ್ದರು. ಬಾರ್ನಿಂದ ಅನತಿ ದೂರ ಸಾಗಿ ಫುಟ್ಪಾತ್ ಮೇಲೆ ಮಂಜುನಾಥ್ ಕೂತಿದ್ದ. ಆಗ ಮಧುಸೂದನ್ ಮತ್ತು ಯತೀಶ್ ಆಟೋದಲ್ಲಿ ಅಲ್ಲಿಗೆ ಬಂದಿದ್ದಾರೆ. ಅಲ್ಲಿ ಮತ್ತೆ ಗಲಾಟೆ ನಡೆದಿದೆ. ಈ ಸಂದರ್ಭ ಅವರು ಇಟ್ಟಿಗೆ ಹಾಗೂ ಕಬ್ಬಿಣದ ಪೈಪ್ನಿಂದ ಮಂಜುನಾಥ್ ಗೆ ಹೊಡೆದಿದ್ದಾರೆ.
ಪರಿಣಾಮ ಗಂಭೀರವಾಗಿ ಗಾಯಗೊಂಡಿದ್ದ ಮಂಜುನಾಥ್ ಮೃತಪಟ್ಟಿದ್ದಾರೆ. ಈ ಕುರಿತು ಜೀವನ್ಬಿಮಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣ ದಾಖಲಾದ ಕೇವಲ ಆರೇ ಗಂಟೆಗಳಲ್ಲಿ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.