ಮುಲ್ಕಿ: ವ್ಯಕ್ತಿಯನ್ನು ಕಲ್ಲಿನಿಂದ ಜಜ್ಜಿ ಕೊಲೆಗೈದಿರುವ ರೀತಿಯಲ್ಲಿ ಮೃತದೇಹ ಪತ್ತೆ
Sunday, March 20, 2022
ಮಂಗಳೂರು: ವ್ಯಕ್ತಿಯೋರ್ವರನ್ನು ಕಲ್ಲಿನಿಂದ ಜಜ್ಜಿ ಕೊಲೆಗೈದಿರುವ ರೀತಿಯಲ್ಲಿ ಮೃತದೇಹ ಮುಲ್ಕಿ ಬಸ್ ನಿಲ್ದಾಣದ ಪೆಟ್ರೋಲ್ ಬಂಕ್ ಬಳಿ ಪತ್ತೆಯಾಗಿದೆ.
ಕಾರ್ಕಳದ ಮುಂಡ್ಕೂರು ನಿವಾಸಿ ಹರೀಶ್ ಸಾಲ್ಯಾನ್ (37) ಮೃತ ವ್ಯಕ್ತಿ.
ಕಟ್ಟಡ ನಿರ್ಮಾಣ ಕಾಮಗಾರಿ ಕೆಲಸ ನಿರ್ವಹಿಸುತ್ತಿದ್ದ ಹರೀಶ್ ಸಾಲ್ಯಾನ್ ಅವರು ಜಾತ್ರೆಯ ನಿಮಿತ್ತ ಶ್ರೀಬಪ್ಪನಾಡು ದೇವಸ್ಥಾನಕ್ಕೆ ಬಂದಿದ್ದರು. ಆದರೆ ಅವರ ಮುಖವನ್ನು ಕಲ್ಲಿನಿಂದ ಜಜ್ಜಿದ ರೀತಿಯಲ್ಲಿ ಕೊಲೆ ಮಾಡಲಾಗಿತ್ತು.
ಹರೀಶ್ ಸಾಲ್ಯಾನ್ ಮೃತದೇಹ ಪತ್ತೆಯಾದ ಸ್ಥಳಕ್ಕೆ ಅನತಿ ದೂರದಲ್ಲಿ ರಕ್ತದ ಕಲೆಯಿದ್ದ ಕಲ್ಲು ಪತ್ತೆಯಾಗಿದೆ. ಅದೇ ಸ್ಥಳದಲ್ಲಿ ಅವರ ಮೊಬೈಲ್ ಫೋನ್, ಬಪ್ಪನಾಡು ದೇವಸ್ಥಾನದ ಪ್ರಸಾದ ಹಾಗೂ ರಸೀದಿ ಪತ್ತೆಯಾಗಿದೆ. ಸ್ಥಳಕ್ಕೆ ಮುಲ್ಕಿ ಠಾಣಾ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಿಸಿ ಆರೋಪಿಯ ಪತ್ತೆಗೆ ಬಲೆ ಬೀಸಿದ್ದಾರೆ.