ಬೆಳ್ತಂಗಡಿ- ಪ್ರೇಯಸಿಯ ವಿಚಾರದಲ್ಲಿ ತಂದೆಯನ್ನೇ ಹತ್ಯೆಗೈದ ಪುತ್ರ: ಹರೀಶ್ ಪೂಜಾರಿ ದೋಷಿಯೆಂದು ನ್ಯಾಯಾಲಯ ತೀರ್ಪು
Friday, April 1, 2022
ಮಂಗಳೂರು: ತಂದೆಯನ್ನೇ ಕೊಲೆಗೈದಿರುವ ಪ್ರಕರಣದಲ್ಲಿ ಪುತ್ರನ ಮೇಲಿನ ಆರೋಪ ಮಂಗಳೂರಿನ 4ನೇ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಸಾಬೀತಾಗೊಂಡಿದೆ. ಶಿಕ್ಷೆಯ ಪ್ರಮಾಣ ಇನ್ನಷ್ಟೇ ಪ್ರಕಟಿಸಬೇಕಾಗಿದೆ.
2021 ಜ.18 ರಂದು ಬೆಳ್ತಂಗಡಿ ತಾಲೂಕು ಗರ್ಡಾಡಿ ಗ್ರಾಮದ ನಡು ಮುಡ್ಯೊಟ್ಟು ನಿವಾಸಿ ಶ್ರೀಧರ ಪೂಜಾರಿ (56) ಎಂಬವರನ್ನು ಅವರ ಪುತ್ರ ಹರೀಶ್ ಪೂಜಾರಿ (28)ಯೇ ಕೊಲೆ ಮಾಡಿರುವ ಆರೋಪದಲ್ಲಿ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆರೋಪಿ ಹರೀಶ್ ಪೂಜಾರಿ ಬೇರೆ ಜಾತಿಯ ಯುವತಿಯನ್ನು ಪ್ರೀತಿಸುತ್ತಿದ್ದ. ಆಕೆಯನ್ನು ಮದುವೆಯಾಅಗಲು ಮನೆಯವರಿಂದ ವಿರೋಧವಿತ್ತು. ಹರೀಶ್ ಪೂಜಾರಿಯ ಸಹೋದರಿ ಮದುವೆಯಾಗದೆ ಈತನ ಮದುವೆ ಮಾಡುವುದಿಲ್ಲ ಎಂದು ತಂದೆ ಶ್ರೀಧರ ಪೂಜಾರಿ ತಿಳಿಸಿದ್ದರು. ಇದರಿಂದ ಮನೆ ಮಂದಿಯೊಂದಿಗೆ ಹರೀಶ್ ಪೂಜಾರಿ ಮನಸ್ತಾಪ ಹೊಂದಿದ್ದ.
2021ರ ಜನವರಿ ಹರೀಶ್ ಪೂಜಾರಿ ತನ್ನ ಪ್ರೇಯಸಿಯೊಂದಿಗೆ ಮನೆ ಬಿಟ್ಟು ಹೋಗಿದ್ದ. 3 ವಾರಗಳ ಬಳಿಕ ವಾಪಸ್ ಮನೆಗೆ ಬಂದಾಗ ಪುತ್ರನಿಗೆ ಆತನ ಪ್ರೇಯಸಿಯೊಂದಿಗೆ ಮನೆಗೆ ಸೇರಿಸಲು ತಂದೆ ಆಕ್ಷೇಪಿಸಿದ್ದರು. ಜ.18 ರಂದು ಮಧ್ಯಾಹ್ನ ಇದೇ ವಿಚಾರಕ್ಕೆ ಪಕ್ಕದ ಮನೆಯ ಸಮೀಪ ತಂದೆ ಮತ್ತು ಮಗನ ಮಧ್ಯೆ ವಾಗ್ವಾದ ನಡೆದಿತ್ತು. ಈ ಸಂದರ್ಭ ಹರೀಶ್ ಪೂಜಾರಿ ತನ್ನ ತಂದೆ ಶ್ರೀಧರ ಪೂಜಾರಿಯವರಿಗೆ ಕೊಲೆ ಬೆದರಿಕೆ ಹಾಕಿ ಹೋಗಿದ್ದ.
ಬಳಿಕ ಅದೇ ದಿನ ಸಂಜೆ ತಂದೆ ಪೇಟೆಗೆ ಹೋಗಿ ಮನೆಗೆ ಬಂದ ಸಂದರ್ಭ ಪುತ್ರ ಹರೀಶ್ ಪೂಜಾರಿ ಮರದ ಪಕ್ಕಾಸಿನಿಂದ ತಂದೆಯ ತಲೆ ಮತ್ತು ಮುಖಕ್ಕೆ ಹೊಡೆದಿದ್ದಾನೆ. ಪರಿಣಾಮ ತೀವ್ರವಾಗಿ ಗಾಯಗೊಂಡಿದ್ದ ಶ್ರೀಧರ್ ಪೂಜಾರಿಯವರು ಆಸ್ಪತ್ರೆಗೆ ದಾಖಲಿಸುವಷ್ಟರಲ್ಲಿ ಮೃತಪಟ್ಟಿದ್ದರು ಎಂದು ದೂರು ದಾಖಲಾಗಿತ್ತು.
ಈ ಬಗ್ಗೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇನ್ಸ್‌ಪೆಕ್ಟರ್ ಸಂದೇಶ್ ತನಿಖೆ ನಡೆಸಿ ದೋಷಾರೋಪಣ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ಮಂಗಳೂರಿನ 4ನೇ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಪ್ರಕರಣದ ವಿಚಾರಣೆಯನ್ನು ಕೈಗೆತ್ತಿಕೊಂಡಿತ್ತು. ನ್ಯಾಯಾಧೀಶೆ ಬಿ.ಆರ್. ಪಲ್ಲವಿ ಅವರು ವಿಚಾರಣೆ ಪೂರ್ಣಗೊಳಿಸಿದ್ದು, ಆರೋಪಿ ಹರೀಶ್ ಪೂಜಾರಿ ದೋಷಿ ಎಂಬುದಾಗಿ ತೀರ್ಪು ನೀಡಿದ್ದಾರೆ. ಶಿಕ್ಷೆಯ ಪ್ರಮಾಣವನ್ನು ಇನ್ನಷ್ಟೇ ಪ್ರಕಟಿಸಬೇಕಾಗಿದೆ.