
ಹೈಟೆಕ್ ವೇಶ್ಯಾವಾಟಿಕೆ ದಂಧೆ ಪ್ರಕರಣ: ಅಪ್ರಾಪ್ತ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿರುವ ನಾಲ್ವರು ಆರೋಪಿಗಳು ಅಂದರ್
Tuesday, March 8, 2022
ಮಂಗಳೂರು: ಅಪ್ರಾಪ್ತ ವಿದ್ಯಾರ್ಥಿನಿಯರನ್ನು ಬಳಸಿಕೊಂಡು ಹೈಟೆಕ್ ವೇಶ್ಯಾವಾಟಿಕೆ ದಂಧೆಯಲ್ಲಿ ತೊಡಗಿಸುತ್ತಿದ್ದ ಪ್ರಕರಣದಲ್ಲಿ ಆರೋಪಿಗಳು ಮತ್ತೋರ್ವ ಅಪ್ರಾಪ್ತ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ್ದಾರೆಂಬ ಕೃತ್ಯವೊಂದು ಪೊಲೀಸ್ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಇದೀಗ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರು ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.
ಮಂಗಳೂರು ವ್ಯಾಸನಗರ ನಿವಾಸಿ ರಶೀದ್ ಸಾಹೇಬ್(73), ಮಲ್ಲಿಕಟ್ಟೆ ನಿವಾಸಿ ಮೊಹಮ್ಮದ್ ಆಲಿ(74), ಕುಲಶೇಖರ ನಿವಾಸಿ ಗ್ರೆಗರಿ ಲಿಯೋನಾರ್ಡ್ ಸಿಕ್ವೇರಾ(62), ಕಾಸರಗೋಡು ಜಿಲ್ಲೆಯ ಉಪ್ಪಳ ನಿವಾಸಿ ಇಸ್ಮಾಯಿಲ್(41) ಬಂಧಿತ ಆರೋಪಿಗಳು.
ನಗರದಲ್ಲಿ ಇತ್ತೀಚಿಗೆ ನಂದಿಗುಡ್ಡದ ರಿಯಾನಾ ರೆಸಿಡೆನ್ಸಿ ಅಪಾರ್ಟ್‌ಮೆಂಟೊಂದರ ಫ್ಲ್ಯಾಟ್ ನಲ್ಲಿ ಹೈಟೆಕ್ ವೇಶ್ಯಾವಾಟಿಕೆ ದಂಧೆಯೊಂದು ಬೆಳಕಿಗೆ ಬಂದಿತ್ತು. ಪ್ರಕರಣದಲ್ಲಿ ಈ ಹಿಂದೆಯೇ ಓರ್ವ ಅಪ್ರಾಪ್ತ ವಿದ್ಯಾರ್ಥಿನಿ ಸೇರಿದಂತೆ ನಾಲ್ವರು ಸಂತ್ರಸ್ತೆಯರನ್ನು ಪೊಲೀಸರು ರಕ್ಷಣೆ ಮಾಡಿದ್ದರು. ಅಲ್ಲದೆ ತನ್ನ ಮನೆಯಲ್ಲಿಯೇ ವೇಶ್ಯಾವಾಟಿಕೆ ನಡೆಸುತ್ತಿದ್ದ ಮಹಿಳೆ, ಆಕೆಯ ಪುತ್ರ, ಪಿಂಪ್ ಗಳು, ಗ್ರಾಹಕರು ಸೇರಿದಂತೆ ಒಟ್ಟು 10 ಮಂದಿ ಆರೋಪಿಗಳನ್ನು ಈಗಾಗಲೇ ಬಂಧಿಸಲಾಗಿತ್ತು.
ಆ ಬಳಿಕ ಪ್ರಕರಣವನ್ನು ಕೂಲಂಕಷವಾಗಿ ತನಿಖೆ ನಡೆಸಿದ್ದ ಪೊಲೀಸರಿಗೆ ಮತ್ತೊಬ್ಬ ಅಪ್ರಾಪ್ತೆಯನ್ನು ಆರೋಪಿಗಳು ವೇಶ್ಯಾವಾಟಿಕೆಗೆ ತಳ್ಳಿರುವುದು ಬಯಲಿಗೆಳೆದಿದ್ದಾರೆ. ಈ ಮೂಲಕ ಗ್ರಾಹಕರ ರೀತಿಯಲ್ಲಿ ಬಂದು ಅಪ್ರಾಪ್ತೆಗೆ ಲೈಂಗಿಕ ಕಿರುಕುಳ ನೀಡಿದ್ದ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಈ ಘಟನೆಯ ಕುರಿತಂತೆ ಮತ್ತೆ ಪ್ರತ್ಯೇಕ ನಾಲ್ಕು ಪೊಕ್ಸೊ ಪ್ರಕರಣ ಸೇರಿದಂತೆ ಒಟ್ಟು ಐದು ಪ್ರಕರಣ ಮಂಗಳೂರು ಪೊಲೀಸರು ದಾಖಲಿಸಿಕೊಂಡಿದ್ದಾರೆ. ಇದೀಗ ಈ ಪ್ರಕರಣದಲ್ಲಿ ಬಂಧಿತರ ಸಂಖ್ಯೆ 14ಕ್ಕೆ ಏರಿದೆ. ಇನ್ನಷ್ಟು ಜನರು ಈ ಕೃತ್ಯದ ಹಿಂದೆ ಇದ್ದು, ಅವರನ್ನೂ ಶೀಘ್ರ ಬಂಧಿಸಲಾಗುತ್ತದೆ ಎಂದು ಮಂಗಳೂರು ಪೊಲೀಸ್ ಕಮಿಷನರ್ ಎನ್.ಶಶಿಕುಮಾರ್ ಹೇಳಿದರು.