ಒಳ ಉಡುಪು ಮೇಲೆ ಎಸಗುವ ಲೈಂಗಿಕ ದೌರ್ಜನ್ಯವೂ ಅತ್ಯಾಚಾರ ಎಂದ ಮೇಘಾಲಯ ಹೈಕೋರ್ಟ್
Thursday, March 17, 2022
ಶಿಲ್ಲಾಂಗ್ (ಮೇಘಾಲಯ): ಅತ್ಯಾಚಾರಕ್ಕೆ ಸಂಬಂಧಿಸಿದಂತೆ ಈಗಾಗಲೇ ವಿವಿಧ ತೀರ್ಪುಗಳನ್ನು ನ್ಯಾಯಾಲಯಗಳು ನೀಡುತ್ತಾ ಬಂದಿದೆ. ಅತ್ಯಾಚಾರಿಗಳು ಪ್ರಕರಣದಿಂದ ತಮ್ಮನ್ನು ರಕ್ಷಿಸಿಕೊಳ್ಳಲು ಹಲವಾರು ಕಾರಣಗಳನ್ನು ನೀಡುತ್ತಾ ಬರುತ್ತಿದ್ದಾರೆ. ಈ ನಡುವೆ ಮೇಘಾಲಯ ಹೈಕೋರ್ಟ್ ಅತ್ಯಾಚಾರಕ್ಕೆ ಸಂಬಂಧಿಸಿದಂತೆ ಮಹತ್ವದ ತೀರ್ಪೊಂದನ್ನು ನೀಡಿದೆ.
ಅದೇನೆಂದರೆ ಉಡುಪು ತೆಗೆದಲ್ಲಿ ಮಾತ್ರ ಅತ್ಯಾಚಾರ ಎನ್ನಲು ಸಾಧ್ಯವಿಲ್ಲ. ಒಳ ಉಡುಪುಗಳ ಮೇಲೆ ಎಸಗುವ ಲೈಂಗಿಕ ದೌರ್ಜನ್ಯವೂ ಅತ್ಯಾಚಾರವಾಗುತ್ತದೆ ಎಂದು ನ್ಯಾಯಾಲಯ ತೀರ್ಪು ನೀಡಿದೆ. 2006ರಲ್ಲಿ ನಡೆದಿದ್ದ ಅತ್ಯಾಚಾರ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಮೇಘಾಲಯ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಸಂಜಿಬ್ ಬ್ಯಾನರ್ಜಿ ಮತ್ತು ನ್ಯಾಯಮೂರ್ತಿ ಡಬ್ಲ್ಯೂ ಡಿಯಾಂಗ್‌ಡೋ ಅವರ ವಿಭಾಗೀಯ ಪೀಠವು ಈ ತೀರ್ಪು ನೀಡಿದೆ. 10 ವರ್ಷದ ಬಾಲಕಿಯೋರ್ವಳ ಮೇಲೆ ಅತ್ಯಾಚಾರವೆಸಗಿದ್ದ ಕಾಮುಕನೋರ್ವನಿಗೆ 2018ರ ಅಕ್ಟೋಬರ್ 31ರಂದು ಸೆಷನ್ಸ್ ಕೋರ್ಟ್ 10 ವರ್ಷ ಜೈಲು ಶಿಕ್ಷೆ ಹಾಗೂ 25 ಸಾವಿರ ರೂ. ದಂಡ ವಿಧಿಸಿತ್ತು.
ಆದರೆ ಈ ತೀರ್ಪನ್ನು ಪ್ರಶ್ನಿಸಿ ಆತ ಹೈಕೋರ್ಟ್ನಲ್ಲಿ ಪ್ರಶ್ನಿಸಿದ್ದ. ತಾನು ಆಕೆಯ ಒಳ ಉಡುಪನ್ನು ತೆಗೆದಿಲ್ಲ, ಆದ್ದರಿಂದ ಇದು ಅತ್ಯಾಚಾರ ಆಗುವುದಿಲ್ಲ ಎಂದು ವಾದಿಸಿದ್ದ. ಘಟನೆ ನಡೆದ ದಿನ ತನ್ನನ್ನು ತಾನು ನಿಯಂತ್ರಿಸಲು ಸಾಧ್ಯವಾಗದೆ ಭಾವೋದ್ವೇಗಕ್ಕೆ ಒಳಗಾಗಿದ್ದೆ ಎಂದು ಆತ ಹೇಳಿದ್ದ. ಆದರೆ ಇದು ಅತ್ಯಾಚಾರ ಆಗುವುದಿಲ್ಲ ಎಂಬ ವಾದವನ್ನು ನ್ಯಾಯಾಲಯ ಒಪ್ಪದೆ ಈ ತೀರ್ಪು ನೀಡಿದೆ.