ಆಟೋ ಏರಿದ ವೈದ್ಯೆಯ ಮೇಲೆ ಅಪ್ರಾಪ್ತರು ಸೇರಿದಂತೆ ಮೂವರಿಂದ ಸಾಮೂಹಿಕ ಅತ್ಯಾಚಾರ: ಐವರು ಅಂದರ್
Friday, March 25, 2022
ವೆಲ್ಲೂರು: ಆಟೋ ಹತ್ತಿದ ಬಿಹಾರ ಮೂಲದ ವೈದ್ಯೆಯ ಮೇಲೆ ಇಬ್ಬರು ಅಪ್ರಾಪ್ತರು ಸೇರಿದಂತೆ ಮೂವರು ಸಾಮೂಹಿಕ ಅತ್ಯಾಚಾರ ಎಸಗಿರುವ ಪ್ರಕರಣವೊಂದು ತಮಿಳುನಾಡು ರಾಜ್ಯದ ವೆಲ್ಲೂರಿನಲ್ಲಿ ಮಾರ್ಚ್ 16ರ ತಡರಾತ್ರಿ ನಡೆದಿದೆ ಎನ್ನಲಾಗಿದೆ.
ಮಹಾರಾಷ್ಟ್ರದ ನಾಗ್ಪುರ ಮೂಲದ ವೈದ್ಯೆಯು ತನ್ನ ಸಹೋದ್ಯೋಗಿಯೊಂದಿಗೆ ಮಾರ್ಚ್ 16ರಂದು ರಾತ್ರಿ ಕಟ್ಪಾಡಿಯಲ್ಲಿರುವ ಥಿಯೆಟರ್ ನಲ್ಲಿ ಸಿನಿಮಾ ನೋಡಿಕೊಂಡು ವಾಪಸ್ ಆಗುತ್ತಿದ್ದರು. ಈ ವೇಳೆ ನಾಲ್ವರು ಪುರುಷ ಪ್ರಯಾಣಿಕರಿದ್ದ ಶೇರ್ ಆಟೋವನ್ನು ಇಬ್ಬರು ಏರಿದ್ದಾರೆ. ಚೆನ್ನೈ- ಬೆಂಗಳೂರು ಹೆದ್ದಾರಿ ಎನ್ಎಚ್48ರಲ್ಲಿ ಗೀನ್ ಸರ್ಕಲ್ ಮಾರ್ಗವಾಗಿ ಓಲ್ಡ್ ಟೌನ್ ಕಡೆಗೆ ಆಟೊವನ್ನು ಕೊಂಡೊಯ್ಯದೆ ಆಟೋ ಚಾಲಕ ಸಥುವಚಾರಿ ಕಡೆಗೆ ತೆರಳಿದ್ದಾನೆ. ಬಳಿಕ ವೈದ್ಯೆಯ ಮೇಲೆ ಮೂವರು ಸಾಮೂಹಿಕವಾಗಿ ಅತ್ಯಾಚಾರ ಮಾಡಿದ್ದಾರೆ. ಅಲ್ಲದೆ ವೈದ್ಯೆ ಹಾಗೂ ಆಕೆಯ ಸಹೋದ್ಯೋಗಿಯಿಂದ 40 ಸಾವಿರ ರೂ. ನಗದು ಹಾಗೂ ಎರಡು ಸವರನ್ ಚಿನ್ನಾಭರಣವನ್ನು ಕಸಿದುಕೊಂಡಿದ್ದಾರೆ.
ವೈದ್ಯೆಯ ಮೇಲೆ ಕಾನೂನಿನ ಸಂಘರ್ಷಕ್ಕೊಳಗಾದ ಇಬ್ಬರು ಬಾಲಕರು ಹಾಗೂ ಮತ್ತೊಬ್ಬ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ. ಈ ವೇಳೆ ಇನ್ನಿಬ್ಬರು ಆರೋಪಿಗಳು ಸಂತ್ರಸ್ತೆಯ ಪುರುಷ ಸಹೋದ್ಯೋಗಿಯನ್ನು ಹಿಡಿದಿಟ್ಟುಕೊಂಡಿದ್ದರು ಎಂದು ತಿಳಿದುಬಂದಿದೆ. ಸಂತ್ರಸ್ತ ಯುವತಿ ತನ್ನ ತವರು ರಾಜ್ಯ ಬಿಹಾರಕ್ಕೆ ತೆರಳಿದ್ದಾರೆ. ಅಲ್ಲದೆ ಮಂಗಳವಾರ ಆನ್‌ಲೈನ್ ಮೂಲಕ ದೂರು ದಾಖಲಿಸಿದ್ದಾರೆ. ಘಟನೆಯ ಸಂಬಂಧ ವೆಲ್ಲೂರು ಉತ್ತರ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 147, 148, 342, 365, 368, 376 (ಡಿ), 376 (ಇ), 395, 397, 506 (ii) ಅಡಿಯಲ್ಲಿ ಪ್ರಕರಣ ದಾಖಲಾಗಿದೆ.