
ಮಂಗಳೂರು: ಕಾರಿನಲ್ಲಿ ಬಂದ ಮುಸುಕುಧಾರಿಗಳಿಂದ ಮೀನು ವ್ಯಾಪಾರಿಯ ತಲವಾರು ಹಲ್ಲೆ ನಡೆಸಿ ದರೋಡೆ
Saturday, March 5, 2022
ಉಳ್ಳಾಲ: ಮುಸುಕುಧಾರಿ ದುಷ್ಕರ್ಮಿಗಳ ತಂಡವೊಂದು ಟೆಂಪೋಗೆ ಕಾರು ಅಡಗಟ್ಟಿ ಮೀನು ವ್ಯಾಪಾರಿಯ ಮೇಲೆ ತಲವಾರು ಬೀಸಿ 2.15 ಲಕ್ಷ ರೂ. ದರೋಡೆಗೈದ ಘಟನೆಯೊಂದು ಇಂದು ಬೆಳಗ್ಗೆ ಉಳ್ಳಾಲ ನೇತ್ರಾವತಿ ಸೇತುವೆ ಬಳಿಯ ಆಡಂಕುದ್ರು ಎಂಬಲ್ಲಿ ನಡೆದಿದೆ.
ಉಳ್ಳಾಲ ಮುಕ್ಕಚ್ಚೇರಿಯ ಮುಸ್ತಫಾ(47) ತಲವಾರು ದಾಳಿಗೊಳಗಾದ ಮೀನು ವ್ಯಾಪಾರಿ. ಮುಸ್ತಫಾ ಎಂದಿನಂತೆ ಬೆಳಗ್ಗೆ ತಮ್ಮ ಟೆಂಪೋದಲ್ಲಿ ಮಂಗಳೂರು ದಕ್ಕೆಗೆ ಮೀನು ಖರೀದಿಸಲೆಂದು ಹೊರಟಿದ್ದಾರೆ. ಆಗ ಈ ಟೆಂಪೋದಲ್ಲಿ ಮಾಸ್ತಿಕಟ್ಟೆಯ ಮೂಸ ಎಂಬವರು ಜೊತೆಗೆ ಪಯಣಿಸುತ್ತಿದ್ದರು. ಟೆಂಪೊ ನೇತ್ರಾವತಿ ಸೇತುವೆ ಬಳಿಯ ಆಡಂಕುದ್ರು ಎಂಬ ಪ್ರದೇಶ ತಲುಪುತ್ತಿದ್ದಂತೆಯೇ ಹಿಂದಿನಿಂದ ಬಂದಿರುವ ಕೆಂಪು ಬಣ್ಣದ ರಿಡ್ಝ್ ಕಾರೊಂದು ಅಡ್ಡಗಟ್ಟಿ ಟೆಂಪೊವನ್ನು ತಡೆದು ನಿಲ್ಲಿಸಿದೆ. ಕಾರಿನಲ್ಲಿ ಮೂರು ಮಂದಿ ಮುಸಕುಧಾರಿಗಳಿದ್ದು ಇಬ್ಬರು ಕೆಳಗಿಳಿದು ಮುಸ್ತಫಾ ಅವರಲ್ಲಿದ್ದ ಹಣದ ಬ್ಯಾಗನ್ನು ಕೊಡುವಂತೆ ಬ್ಯಾರಿ ಭಾಷೆಯಲ್ಲಿ ಬೆದರಿಕೆಯೊಡ್ಡಿದ್ದಾರೆ.
ಆದರೆ ಮುಸ್ತಫಾ ಹಣ ಕೊಡಲು ನಿರಾಕರಿಸಿ, ಟೆಂಪೊದಿಂದ ಇಳಿಯಲು ಪ್ರಯತ್ನಿಸಿದ್ದಾರೆ. ಈ ವೇಳೆ ಮುಸುಕುಧಾರಿಗಳು ಮುಸ್ತಾಫಾ ಮೇಲೆ ತಲವಾರು ದಾಳಿ ನಡೆಸಿದ್ದಾರೆ. ಪರಿಣಾಮ ಅವರು ಎರಡೂ ಕೈಗಳಿಗೂ ಗಂಭೀರ ಗಾಯಗಳಾಗಿದೆ. ಬಳಿಕ ಮುಸ್ತಫಾ ಅವರಲ್ಲಿದ್ದ 2.5 ಲಕ್ಷ ರೂ. ಅನ್ನು ದರೋಡೆಕೋರರು ದೋಚಿ ಪರಾರಿಯಾಗಿದ್ದಾರೆ. ಗಾಯಾಳು ಮುಸ್ತಾಫರನ್ನು ತೊಕ್ಕೊಟ್ಟಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ದರೋಡೆ ನಡೆದ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಬಗ್ಗೆ ಕಂಕನಾಡಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.