ಮದ್ಯದ ಮತ್ತಿನಲ್ಲಿ ಎಟಿಎಂ ದರೋಡೆಗೆತ್ನಿಸಿದ ಕುಡುಕ ಅರೆಸ್ಟ್
Wednesday, March 16, 2022
ಬೆಂಗಳೂರು: ಮದ್ಯದ ಮತ್ತಿನಲ್ಲಿ ಎಟಿಎಂ ದರೋಡೆಗೆತ್ನಿಸಿದ ವ್ಯಕ್ತಿಯೋರ್ವನನ್ನು ಪೊಲೀಸರು ಬಂಧಿಸಿರುವ ಘಟನೆ ವರದಿಯಾಗಿದೆ. ಆರೋಪಿಯನ್ನು ಜೆ.ಸಿ.ನಗರ ಪೊಲೀಸರು ಬಂಧಿಸಿದ್ದಾರೆ.
ಖಾಸಗಿ ಸಂಸ್ಥೆಯಲ್ಲಿ ಹೌಸ್ ಕೀಪಿಂಗ್ ವೃತ್ತಿ ನಿರ್ವಹಿಸುತ್ತಿದ್ದ ಕೊಂಡಯ್ಯ (35) ಬಂಧಿತ ಆರೋಪಿ.
ಅತಿಯಾಗಿ ಮದ್ಯಪಾನ ಮಾಡಿದ್ದ ಕೊಂಡಯ್ಯ ಮೊನ್ನೆ ತಡರಾತ್ರಿ ಎಂ.ಆರ್.ಎಸ್. ಪಾಳ್ಯದ ಎಚ್ಡಿಎಫ್ಸಿ ಬ್ಯಾಂಕ್ ಎಟಿಎಂ ಅನ್ನು ದರೋಡೆ ಮಾಡಲು ಯತ್ನಿಸಿದ್ದಾನೆ. ಎಟಿಎಂ ಕೇಂದ್ರದ ಸಿಸಿ ಕ್ಯಾಮರಾ ಒಡೆದು ಬಳಿಕ ಎಟಿಎಂ ಒಡೆಯಲು ಯತ್ನಿಸಿದ್ದಾನೆ. ಆಗ ಎಟಿಎಂ ನಿರ್ವಹಣಾ ಕೇಂದ್ರಕ್ಕೆ ಅಲರ್ಟ್ ಸಂದೇಶ ರವಾನೆಯಾಗಿದೆ. ಪರಿಣಾಮ ತಕ್ಷಣ ಎಚ್ಚೆತ್ತ ಎಟಿಎಂ ನಿರ್ವಹಣಾ ಕೇಂದ್ರದ ಸಿಬ್ಬಂದಿ ಜೆ.ಸಿ.ನಗರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಈ ದೂರಿನನ್ವಯ ಕಾರ್ಯಾಚರಣೆಗಿಳಿದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.