ಸಂಪಾಜೆ: ಮನೆಮಂದಿಗೆ ಮಾರಕಾಯುಧ ತೋರಿಸಿ ದರೋಡೆ: ಲಕ್ಷಾಂತರ ರೂ. ಚಿನ್ನಾಭರಣ, ನಗದು ದೋಚಿದ ದುಷ್ಕರ್ಮಿಗಳು
Monday, March 21, 2022
ಮಂಗಳೂರು: ಮನೆಮಂದಿಗೆ ಮಾರಕಾಸ್ತ್ರ ತೋರಿಸಿ ಆರು ಮಂದಿ ಡಕಾಯಿತರ ತಂಡ 5.50 ಲಕ್ಷ ರೂ. ಚಿನ್ನಾಭರಣ, 1.50 ಲಕ್ಷ ರೂ. ನಗದು ಹಾಗೂ ಒಂದು ಮೊಬೈಲ್ ಫೋನ್ ಕಳವುಗೈದ ಘಟನೆ ಸುಳ್ಯ ತಾಲೂಕಿನ ಸಂಪಾಜೆ ಗ್ರಾಮದ ಚಟ್ಟೆಕಲ್ಲು ಎಂಬಲ್ಲಿ ನಡೆದಿದೆ.
ಮಾರ್ಚ್ 20ರಂದು ರಾತ್ರಿ 8.30-9 ಗಂಟೆ ಸುಮಾರಿಗೆ ಏಕಾಏಕಿ ಮನೆಗೆ ಬಂದ ದುಷ್ಕರ್ಮಿಗಳು ಮನೆಮಂದಿಗೆ ಮಾರಕಾಯುಧ ತೋರಿಸಿದ್ದಾರೆ. ಅಲ್ಲದೆ ಮನೆಮಂದಿಯನ್ನು ಕೂಡಿ ಹಾಕಿ ಅವರಿಂದ ಗಾದ್ರೆಜ್, ಕಪಾಟು ಕೀ ಬಲಾತ್ಕಾರವಾಗಿ ಕಸಿದು ಚಿನ್ನಾಭರಣ ಹಾಗೂ ಒಂದುವರೆ ಲಕ್ಷ ರೂ., ಒಂದು ಮೊಬೈಲ್ ದರೋಡೆಗೈದಿದ್ದಾರೆ. ಅಲ್ಲದೆ ಮನೆಯಲ್ಲಿದ್ದ ಹೆಂಗಸರ ಕತ್ತಿನಲ್ಲಿದ್ದ ಒಡವೆಗಳನ್ನು ಚಾಕು ತೋರಿಸಿ ಕದ್ದೊಯ್ದಿದ್ದಾರೆ.
ದರೋಡೆ ಕೃತ್ಯ ನಡೆಸಿದರವರು ಮಾಸ್ಕ್, ಗ್ಲೌಸ್ ಧರಿಸಿದ್ದು, ಮಾರಕಾಯುಧಗಳನ್ನು ಹಿಡಿದುಕೊಂಡಿದ್ದರು. ಆರು ಮಂದಿ ದುಷ್ಕರ್ಮಿಗಳಲ್ಲಿ ಐವರು 20-30 ವರ್ಷ ಒಳಗಿನವರಾಗಿದ್ದು, ಉಳಿದ ಓರ್ವನು 45-50 ವರ್ಷ ವಯಸ್ಸಿನವನಾಗಿದ್ದ. ಇವರೆಲ್ಲರೂ ತಮಿಳು ಮಾತನಾಡುತ್ತಿದ್ದರು.
ಈ ಬಗ್ಗೆ ಸುಳ್ಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ದುಷ್ಕರ್ಮಿಗಳ ಪತ್ತೆಗೆ ತನಿಖೆ ನಡೆಸುತ್ತಿದ್ದಾರೆ.