ಕಾಂಗ್ರೆಸ್ ನಲ್ಲಿ ಸಾಫ್ಟ್ ಮತ್ತು ಹಾರ್ಡ್ ಹಿಂದುತ್ವ ಅಂಥ ಇಲ್ಲ: ಸಿದ್ದರಾಮಯ್ಯ
Saturday, March 19, 2022
ಮಂಗಳೂರು: ಕಾಂಗ್ರೆಸ್ ನಲ್ಲಿ ಸಾಫ್ಟ್ ಮತ್ತು ಹಾರ್ಡ್ ಹಿಂದುತ್ವ ಅಂಥ ಇಲ್ಲ. ನಾವು ಹಿಂದೂ ಧರ್ಮದ ಮೇಲೆ ನಂಬಿಕೆ ಇಟ್ಟವರು. ಎಲ್ಲಾ ಧರ್ಮಗಳಿಗೂ ಸಮಾನ ಗೌರವ ಕೊಡ್ತೇವೆ ಎಂದು ಮಂಗಳೂರಿನಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು.
ಹಿಜಾಬ್ ವಿರೋಧಿಸಿ ಮುಸ್ಲಿಂ ಸಂಘಟನೆಗಳ ಬಂದ್ ವಿಚಾರದ ಬಗ್ಗೆ ಮಾತನಾಡಿದ ಅವರು, ಅಸಮಾಧಾನ ಇರುವವರು ಬಂದ್ ಮಾಡಿದ್ದಾರೆ. ಆದರೆ ಹೈಕೋರ್ಟ್, ಸುಪ್ರೀಂ ಕೋರ್ಟ್ ಯಾವುದರ ನಿರ್ಧಾರವನ್ನೂ ವಿರೋಧ ಮಾಡಬಾರದು.ಯಾವ ಧರ್ಮದವರೂ ಕೋಮುವಾದ ಮಾಡಬಾರದು. ಎಲ್ಲಾ ಧರ್ಮಗಳನ್ನ ಸಮಾನವಾಗಿ ಕಾಣುವ ಕೆಲಸ ಆಗಲಿ ಎಂದರು.
ಶಾಲೆಗಳಲ್ಲಿ ಭಗವದ್ಗೀತೆ ಕಲಿಕೆಯ ಬಗ್ಗೆ ಚಿಂತನೆ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ನೈತಿಕ ಶಿಕ್ಷಣ ಕಲಿಸುವುದಕ್ಕೆ ನಮ್ಮ ಯಾವುದೇ ತಕರಾರಿಲ್ಲ. ನಾವು ಸಂವಿಧಾನದ ಜಾತ್ಯಾತೀತ ತತ್ವಗಳನ್ನು ನಂಬುತ್ತೇವೆ. ಭಗವದ್ಗೀತೆ, ಕುರಾನ್, ಬೈಬಲ್ ಯಾವುದನ್ನು ಹೇಳಿಕೊಟ್ಟರೂ ನಮ್ಮ ವಿರೋಧವಿಲ್ಲ. ಆದರೆ ಮಕ್ಕಳಿಗೆ ಅಗತ್ಯವಾಗಿ ಗುಣಮಟ್ಟದ ಶಿಕ್ಷಣ ನೀಡಬೇಕು. ಭಗವದ್ಗೀತೆ ಬಗ್ಗೆ ಸರ್ಕಾರ ತೀರ್ಮಾನ ಮಾಡಿಲ್ಲ, ಗುಜರಾತ್ ನಲ್ಲಿ ಮಾಡಿದ್ದಾರಷ್ಟೇ. ಭಗವದ್ಗೀತೆ ಮನೆಯಲ್ಲಿ ಹೇಳಿಕೊಡ್ತಾರೆ, ದೇವರ ಬಗ್ಗೆ ಹೇಳ್ತಾರೆ. ರಾಮಾಯಣ, ಮಹಾಭಾರತ ಎಲ್ಲಾನೂ ಮನೆಯಲ್ಲಿ ಹೇಳಿ ಕೊಡುತ್ತಾರೆ. ನೈತಿಕ ಶಿಕ್ಷಣ ಬೇಕು, ಆದರೆ ಸಂವಿಧಾನಕ್ಕೆ ವಿರುದ್ದವಾಗಿ ಯಾವುದೂ ನಡೆಯಬಾರದು. ನಮ್ಮದು ಬಹುಸಂಸ್ಕೃತಿ ಇರೋ ರಾಷ್ಟ್ರ, ನಮ್ಮಲ್ಲಿ ಸಹಬಾಳ್ವೆ ಇರಬೇಕು ಎಂದು ಹೇಳಿದರು.