
ತನ್ನ ಸಾವಿಗೆ ಪ್ರೇಯಸಿ ಮನೆಯವರೇ ಕಾರಣವೆಂದು ವೀಡಿಯೋ ಚಿತ್ರೀಕರಿಸಿ ಆತ್ಮಹತ್ಯೆಗೆ ಯತ್ನಿಸಿದ ಯುವಕ!
Tuesday, March 8, 2022
ಚಿಕ್ಕಬಳ್ಳಾಪುರ: ಪ್ರೇಮವೈಫಲ್ಯದಿಂದ ಮನನೊಂದ ಯುವಕನೋರ್ವನು ತನ್ನ ಸಾವಿಗೆ ಪ್ರೇಯಸಿಯ ಕುಟುಂಬದವರೇ ಕಾರಣ ಎಂದು ಡೆತ್ ನೋಟ್ ಬರೆದಿಟ್ಟು ವಿಷ ಸೇವನೆ ಮಾಡಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ತಾಲೂಕಿನ ತಿರ್ನಹಳ್ಳಿ ಗ್ರಾಮದಲ್ಲಿ ನಡೆದಿದೆ.
ತಿರ್ನಹಳ್ಳಿ ಗ್ರಾಮದ ಕಿಶೋರ್ (25) ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿರುವ ಯುವಕ.
ಕಿಶೋರ್ ಕಳೆದ ಒಂದು ವರ್ಷದಿಂದ ತನ್ನದೇ ಗ್ರಾಮದ ಯುವತಿಯೋರ್ವಳನ್ನು ಪ್ರೀತಿಸುತ್ತಿದ್ದ. ಈ ವಿಚಾರ ಆಕೆಯ ಕುಟುಂಬದವರಿಗೆ ತಿಳಿದು ವಿರೋಧ ವ್ಯಕ್ತವಾಗಿತ್ತು. 'ಆ ಬಳಿಕ ತಮ್ಮ ಪ್ರೀತಿಗೆ ಅಡ್ಡಬರುತ್ತಿರುವ ಪ್ರೇಯಸಿಯ ಮನೆಯವರು ತನಗೆ ಹಿಂಸೆ ನೀಡುತ್ತಿದ್ದಾರೆ. ಹೀಗಾಗಿ ನಾನು ವಿಷ ಸೇವಿಸುತ್ತಿದ್ದು, ತನ್ನ ಸಾವಿಗೆ ಆಕೆಯ ಮನೆಯವರೇ ಕಾರಣ' ಎಂದು ಬರೆದಿಟ್ಟ ಕಿಶೋರ್, ಮೊಬೈಲ್‌ನಲ್ಲಿ ವೀಡಿಯೋ ಮಾಡಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ.
ತಕ್ಷಣ ಕಿಶೋರ್ ನನ್ನು ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ನೀಡಲಾಗುತ್ತಿದೆ. ಈ ಬಗ್ಗೆ ನಂದಿಗಿರಿಧಾಮ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.