
ಕೊಟ್ಟ ಹಣ ವಾಪಸ್ ಕೊಡದ ಮಹಿಳೆಯ ಮನೆಯ ಮುಂಭಾಗವೇ ವ್ಯಕ್ತಿ ಆತ್ಮಹತ್ಯೆ
Thursday, March 3, 2022
ಶಿವಮೊಗ್ಗ: ನೀಡಿರುವ ಹಣ ವಾಪಸ್ ನೀಡದೆ ಸತಾಯಿಸುತ್ತಿದ್ದ ಮಹಿಳೆಯ ಮನೆಯ ಮುಂಭಾಗವೇ ವ್ಯಕ್ತಿಯೊಬ್ಬ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡ ದುರ್ಘಟನೆ ಶಿವಮೊಗ್ಗ ಜಿಲ್ಲೆಯಲ್ಲಿ ನಡೆದಿದೆ.
ಹೊಸಮನೆ ಬಡಾವಣೆಯ ಮಂಜುನಾಥ (45) ಮೃತ ದುರ್ದೈವಿ.
ಮಂಜುನಾಥ ಮಹಿಳೆಯೊಬ್ಬರಿಗೆ 25 ಲಕ್ಷ ರೂ. ಸಾಲ ನೀಡಿದ್ದರು. ಆದರೆ ಕೊಟ್ಟ ಹಣವನ್ನು ಹಿಂದಿರುಗಿಸದೆ ಮಹಿಳೆ ಸತಾಯಿಸಿದ್ದರು. ಅಲ್ಲದೆ ಹಣ ಕೇಳಿದ್ದಕ್ಕೆ ಮಂಜುನಾಥರ ಮೇಲೆ ಮಹಿಳೆ ಹಾಗೂ ಆಕೆಯ ಪುತ್ರ ಹಲ್ಲೆ ಕೂಡ ಮಾಡಿದ್ದರು.
ಪರಿಣಾಮ ಮನನೊಂದ ಮಂಜುನಾಥ ಸೋಮವಾರ ಬೆಳಗ್ಗೆ ಹೊಸಮನೆ ಬಡಾವಣೆಯ ಮಹಿಳೆ ಮನೆಯ ಮುಂಭಾಗವೇ ಸೀಮೆಎಣ್ಣೆ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದರು. ತೀವ್ರವಾಗಿ ಗಾಯಗೊಂಡಿದ್ದ ಅವರನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಅವರು ಚಿಕಿತ್ಸೆ ಫಲಕಾರಿಯಾಗದೆ ಬುಧವಾರ ಮೃತಪಟ್ಟಿದ್ದಾರೆ. ಈ ಬಗ್ಗೆ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.