-->
ಪ್ರಿಯಕರನ ಮದುವೆಯಂದೇ ನೇಣಿಗೆ ಶರಣಾಗಿ ಪ್ರಾಣ ಕಳೆದುಕೊಂಡ ಪ್ರೇಯಸಿ: ತಾಳಿ‌ಕಟ್ಟಿ ಮಂಟಪದಿಂದ ಕಾಲ್ಕಿತ್ತ ಮದುಮಗ

ಪ್ರಿಯಕರನ ಮದುವೆಯಂದೇ ನೇಣಿಗೆ ಶರಣಾಗಿ ಪ್ರಾಣ ಕಳೆದುಕೊಂಡ ಪ್ರೇಯಸಿ: ತಾಳಿ‌ಕಟ್ಟಿ ಮಂಟಪದಿಂದ ಕಾಲ್ಕಿತ್ತ ಮದುಮಗ

ಶಿವಮೊಗ್ಗ: ನಾಲ್ಕೈದು ವರ್ಷಗಳಿಂದ ಈ ಜೋಡಿ ಪ್ರೀತಿಯ ಬಲೆಗೆ ಬಿದ್ದಿತ್ತು. ಪರಸ್ಪರ ಜಾತಿ ಬೇರೆಯಾಗಿದ್ದರೂ ಇವರ ನಡುವಿನ ಪ್ರೀತಿಗೇನೂ ಕೊರತೆಯಿರಲಿಲ್ಲ. ವೃತ್ತಿಯಲ್ಲೂ ಸಮಾನತೆ ಕಾಯ್ದುಕೊಂಡಿದ್ದರು. ಎಲ್ಲವೂ ಅಂದುಕೊಂಡಂತೆ ಆಗಿದ್ದರೆ, ಇಬ್ಬರ ವಿವಾಹ ನಡೆದು ಯುವತಿ, ಪಿಎಚ್‍ಡಿ ಪದವೀಧರೆಯೂ ಆಗಿರುತ್ತಿದ್ದಳು. ಆದರೆ, ಪ್ರೀತಿಸಿದ ಯುವಕ ಕೈಕೊಟ್ಟನೆಂದು ನೊಂದು ಯುವತಿ ಆತನ ಮದುವೆ ದಿನದಂದೇ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.  

ಹೌದು. ಪ್ರೀತಿಸಿದ ಯುವಕ ಬೇರೊಬ್ಬಳನ್ನು ಮದುವೆಯಾದನೆಂದು ನೊಂದು ಯುವತಿ ಪ್ರಿಯಕರನ ಮದುವೆ ದಿನದಂದೇ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಶಿವಮೊಗ್ಗದಲ್ಲಿ ನಡೆದಿದೆ. ರೂಪಾ (28) ಎಂಬಾಕೆಯೇ ನೇಣಿಗೆ ಶರಣಾದವಳು. ಶಿವಮೊಗ್ಗ ನಿವಾಸಿಗಳೇ ಆಗಿದ್ದ ರೂಪಾ ಹಾಗೂ ಮುರಳಿ ಕಳೆದ ನಾಲ್ಕೈದು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಇಬ್ಬರ ಜಾತಿ ಬೇರೆಯಾಗಿದ್ದರೂ ವೃತ್ತಿಯಲ್ಲಿ ಇಬ್ಬರೂ ಉಪನ್ಯಾಸಕರಾಗಿದ್ದರು. ಮುರಳಿ ಡಿವಿಎಸ್ ಕಾಲೇಜಿನಲ್ಲಿ ಇಂಗ್ಲಿಷ್ ಉಪನ್ಯಾಸಕರಾಗಿದ್ದರು. ರೂಪಾ ಸಹ್ಯಾದ್ರಿ ಕಾಲೇಜಿನಲ್ಲಿ ರಾಜ್ಯಶಾಸ್ತ್ರ ಉಪನ್ಯಾಸಕಿಯಾಗಿದ್ದರು. ಇದರೊಂದಿಗೆ ಪಿಎಚ್.ಡಿ  ಮಾಡುತ್ತಿದ್ದರು. ಎಲ್ಲವೂ ಅಂದುಕೊಂಡಂತೆ ಆಗಿದ್ದರೆ, ಇನ್ನೆರಡು ತಿಂಗಳಿನಲ್ಲಿ ಆಕೆ ಪಿಎಚ್‍ಡಿ ಪದವೀಧರೆಯಾಗುತ್ತಿದ್ದರು. 

ಅಷ್ಟರಲ್ಲೇ ಪ್ರೀತಿಸಿದಾತ ಮೋಸ ಮಾಡಿದನೆಂದು ನೇಣು ಬಿಗಿದು ಜೀವವನ್ನೇ ಕಳೆದುಕೊಂಡಿದ್ದಾರೆ. ಇದರಿಂದ ಪಿಎಚ್‍ಡಿ ಪಡೆಯುವ ಕನಸೂ ನುಚ್ಚುನೂರಾಗಿದೆ.  ಹಿಂದೊಮ್ಮೆ ವಿಷ ಸೇವಿಸಿದ್ದ ರೂಪಾರಿಗೆ ಮದುವೆ ಮಾಡಲು ಪೋಷಕರು ಗಂಡು ಹುಡುಕಲು ಪ್ರಾರಂಭಿಸಿದ್ದರು. ಅಲ್ಲದೇ, ಸಾಕಷ್ಟು ಕಡೆಯಿಂದಲೂ ಸಂಬಂಧಗಳು ಬಂದಿದ್ದವು. ಆದರೆ ರೂಪಾ ಯಾವುದನ್ನೂ ಒಪ್ಪಿಕೊಂಡಿರಲಿಲ್ಲ. ಪಿಎಚ್‍ಡಿ ಮುಗಿದ ಬಳಿಕ ಪ್ರೀತಿಯ ವಿಚಾರವನ್ನು ಮನೆಯವರಿಗೆ ತಿಳಿಸಿ, ಮದುವೆಯಾಗೋಣವೆಂದು ಮುಂದೂಡುತ್ತಾ ಬಂದಿದ್ದರು.

2 ತಿಂಗಳ ಹಿಂದೆ ಪುತ್ರಿಯ ಪ್ರೀತಿ ವಿಚಾರ ಮನೆಯಲ್ಲಿ ತಿಳಿದು ಗಲಾಟೆಯೂ ನಡೆದಿತ್ತು. ಇದರಿಂದ ಮನನೊಂದಿದ್ದ ರೂಪಾ ಫೆಬ್ರವರಿಯಲ್ಲಿ ವಿಷ ಸೇವಿಸಿ ಆತ್ಮಹತ್ಯೆಗೂ ಯತ್ನಿಸಿದ್ದರು. ಬಳಿಕ ಚಿಕಿತ್ಸೆ ಪಡೆದು ಚೇತರಿಸಿಕೊಂಡಿದ್ದರು ಎಂದು ತಿಳಿದುಬಂದಿದೆ. 

ಬಳಿಕ ರೂಪಾ ಪೋಷಕರೇ ಜಾತಿ ಬೇರೆಯಾಗಿದ್ದರೂ ಪರವಾಗಿಲ್ಲ, ಪುತ್ರಿ ಚೆನ್ನಾಗಿದ್ದರೆ ಸಾಕು ಎಂದು ಮುರಳಿ ಜೊತೆ ವಿವಾಹ ಮಾಡಲು ನಿರ್ಧರಿಸಿದ್ದರು. ಆದರೆ ಈ ನಡುವೆ ಮುರಳಿ ರೂಪಾಳಿಗೆ ಕೈಕೊಟ್ಟು ಇಂದು ಶಿವಮೊಗ್ಗದ ಆದಿಚುಂಚನಗಿರಿ ಕಲ್ಯಾಣ ಮಂಟಪದಲ್ಲಿ ಪಲ್ಲವಿ ಎಂಬಾಕೆಯೊಂದಿಗೆ ಮದುವೆ ಮಾಡಿಕೊಂಡಿದ್ದಾನೆ. ಇದರಿಂದ ಮನನೊಂದ ರೂಪ ಡೆತ್‌ನೋಟ್‌ ಬರೆದಿಟ್ಟು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.  ರೂಪಾ ಆತ್ಮಹತ್ಯೆ ಮಾಡಿಕೊಂಡ ವಿಚಾರ ತಿಳಿದ ಮುರಳಿ ಪಲ್ಲವಿಗೆ ತಾಳಿ ಕಟ್ಟಿ ಕಲ್ಯಾಣ ಮಂಟಪದಿಂದಲೇ ಪರಾರಿಯಾಗಿದ್ದಾನೆ. ಘಟನೆ ಕುರಿತು ದೊಡ್ಡಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮುರಳಿ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.     

Ads on article

Advertise in articles 1

advertising articles 2

Advertise under the article