ಶಾಲೆಯಲ್ಲಿ ಅವಮಾನವಾಯಿತೆಂದು ನೇಣಿಗೆ ಶರಣಾದ ವಿದ್ಯಾರ್ಥಿ!
Friday, March 25, 2022
ಬೆಂಗಳೂರು: ಶಾಲೆಯಲ್ಲಿ ಅವಮಾನವಾಯಿತೆಂದು ಮನನೊಂದು 8ನೇ ತರಗತಿ ವಿದ್ಯಾರ್ಥಿಯೊಬ್ಬ ನೇಣಗೆ ಶರಣಾದ ಘಟನೆ ವಿಜಯನಗರದಲ್ಲಿ ಸಂಭವಿಸಿದೆ.
ಧೀರಜ್ (14) ನೇಣಿಗೆ ಶರಣಾದ ವಿದ್ಯಾರ್ಥಿ. ಈತ ರಾಜರಾಜೇಶ್ವರಿನಗರ ಸಮೀಪದ ಸ್ವರ್ಗರಾಣಿ ಸ್ಕೂಲ್ ಆ್ಯಂಡ್ ಪಿಯು ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ.
ಧೀರಜ್ ಬುಧವಾರ ಶಾಲೆಯಲ್ಲಿ ಪರೀಕ್ಷೆ ಬರೆಯುತ್ತಿದ್ದ. ಈ ಸಂದರ್ಭ ಕಾಪಿ ಮಾಡುತ್ತಿದ್ದ ಎನ್ನಲಾಗಿದೆ. ಇದನ್ನು ಗಮನಿಸಿರುವ ಶಿಕ್ಷಕರು ಪೋಷಕರಿಗೆ ಮಾಹಿತಿ ನೀಡಿದ್ದಾರೆ. ಆದ್ದರಿಂದ ಪ್ರಾಂಶುಪಾಲರು ಧೀರಜ್ನಿಂದ ಕ್ಷಮಾಪಣಾ ಪತ್ರ ಬರೆಸಿಕೊಂಡಿದ್ದರು. ಪರಿಣಾಮ ಮನನೊಂದ ವಿದ್ಯಾರ್ಥಿ ಧೀರಜ್ ಮನೆಗೆ ಬಂದು ಆತ್ಮಹತ್ಯೆಗೆ ಶರಣಾಗಿದ್ದಾನೆ ಎನ್ನಲಾಗಿದೆ.
ಧೀರಜ್ ಓದಿನಲ್ಲಿ ಸದಾ ಮುಂದಿದ್ದು, ಹೆಚ್ಚಿನ ಅಂಕಗಳನ್ನು ಗಳಿಸುತ್ತಿದ್ದ. ಒಂದು ವೇಳೆ ಆತ ತಪ್ಪು ಮಾಡಿದ್ದರೂ ಪರೀಕ್ಷೆ ಬರೆಯಲು ಅವಕಾಶ ಮಾಡಿಕೊಡಬೇಕಿತ್ತು. ಆದರೆ ಅದಕ್ಕೆ ಅವಕಾಶ ಕೊಡದೆ ಧೀರಜ್ ಕಾಪಿ ಮಾಡಿರುವ ಬಗ್ಗೆ ಶಾಲೆಗೆಲ್ಲಾ ತಿಳಿಯುವಂತೆ ಮಾಡಿ ಅವಮಾನಿಸಿದ್ದಾರೆ. ಈ ರೀತಿ ಮಾಡಬಾರದಿತ್ತು ಎಂದು ಇತರ ಮಕ್ಕಳ ಪೋಷಕರು ಶಾಲೆಯ ಬಳಿ ಆಕ್ರೋಶ ಹೊರಹಾಕಿದ್ದಾರೆ.