ಕೈತುಂಬಾ ಸಂಬಳ ಬರುತ್ತಿದ್ದ ಐಟಿ ಕೆಲಸ ತೊರೆದು ರಸ್ತೆ ಬದಿಯ ಬಿರಿಯಾನಿ ಅಂಗಡಿ ಆರಂಭಿಸಿದ ಟೆಕ್ಕಿ ಗೆಳೆಯರು
Wednesday, March 16, 2022
ಹೊಸದಿಲ್ಲಿ: ಇಂಜಿನಿಯರಿಂಗ್ ಶಿಕ್ಷಣ ಪಡೆದು ಒಂದೊಳ್ಳೆ ಐಟಿ ನೌಕರಿ ಸಿಕ್ಕಿಬಿಟ್ಟರೆ ಸಾಕು, ಲೈಫ್ ಸೆಟಲ್ ಎಂದು ಭಾವಿಸುವವರೇ ಅಧಿಕ. ಆದರೆ ಹರಿಯಾಣ ಮೂಲದ ಇಂಜಿನಿಯರ್‌ಗಳಿಬ್ಬರು ಕೈ ತುಂಬ ಸಂಬಳ ತರುತ್ತಿದ್ದ ಇಂಜಿನಿಯರಿಂಗ್ ಕೆಲಸ ಬಿಟ್ಟು 'ಇಂಜಿನಿಯರ್ಸ್ ವೆಜ್ ಬಿರಿಯಾನಿ’ ಅಂಗಡಿ ತೆರೆದು ಎಲ್ಲರ ಗಮನ ಸೆಳೆದಿದ್ದಾರೆ.
ಸೋನಿಪತ್ ಐಟಿ ಸಂಸ್ಥೆಯಲ್ಲಿ ಕೆಲಸ ಮಾಡಿಕೊಂಡಿದ್ದ ರೋಹಿತ್ ಸೈನಿ ಮತ್ತು ವಿಶಾಲ್ ಭಾರದ್ವಾಜ್ ಅವರೇ ಈ ಇಂಜಿನಿಯರ್ ಗಳು. ಈ ಇಬ್ಬರೂ ಇಂಜಿನಿಯರ್ ಗಳಿಗೆ ಐಟಿ ಕೆಲಸದಲ್ಲಿ ತೃಪ್ತಿ ಇರಲಿಲ್ಲ. ಮೊದಲಿನಿಂದಲೂ ಅಡುಗೆ ಮಾಡುವ ಬಗ್ಗೆ ಒಲವಿದ್ದ ರೋಹಿತ್, ಬಿರಿಯಾನಿ ಅಂಗಡಿ ತೆರೆಯುವ ಉಪಾಯ ಮಾಡಿದ್ದಾರೆ. ಈ ಸಂದರ್ಭ ಅವರ ಸ್ನೇಹಿತ ವಿಶಾಲ್ ಕೂಡ ಜತೆಯಾಗಿದ್ದಾರೆ.
ಈ ಇಬ್ಬರೂ ಸೇರಿ ಸೋನಿಪತ್ ರೆಸ್ಟೋರೆಂಟ್‌ಗಳಲ್ಲಿ ದುಬಾರಿ ಬೆಲೆಗೆ ಲಭ್ಯವಿರುವ ವಿಶೇಷ ಬಿರಿ ಯಾನಿಯನ್ನು ರಸ್ತೆ ಬದಿಯ ಅಂಗಡಿಗಳಲ್ಲಿ ಅತ್ಯಂತ ಕಡಿಮೆ ಬೆಲೆಗೆ ಮಾರಾಟ ಮಾಡಲಾರಂಭಿಸಿದ್ದಾರೆ. ಅದಷ್ಟೇ ಅಲ್ಲದೆ ಈ ಹಿಂದೆಯೇ ರೋಹಿತ್ ತಾನು ಆರಂಭಿಸಿದ್ದ “ಕುಕ್ಕಿಂಗ್ ವಿತ್ ರೋಹಿತ್’ ಹೆಸರಿನ ಯೂಟ್ಯೂಬ್ ಚಾನೆಲ್‌ನಲ್ಲಿಯೂ ಕೆಲವು ವಿಶೇಷ ರೆಸಿಪಿಗಳ ವೀಡಿಯೋಗಳನ್ನೂ ಹಂಚಿಕೊಳ್ಳಲಾರಂಭಿಸಿದ್ದಾರೆ.
ಇಂಜಿನಿಯರ್ಸ್ ವೆಜ್ ಬಿರಿಯಾನಿ ಹೆಸರಿನಲ್ಲೇ ನಡೆಯುತ್ತಿರುವ ಬಿರಿಯಾನಿ ಅಂಗಡಿಯಲ್ಲಿ ಅಚಾರಿ ಬಿರಿಯಾನಿ ಮತ್ತು ಗ್ರೇವಿ ಚಾಪ್ ಬಿರಿಯಾನಿ ಮಾರಾಟ ಮಾಡಲಾಗುತ್ತಿದೆ. ಅರ್ಧ ತಟ್ಟೆ ಅಚಾರಿ ಬಿರಿಯಾನಿಗೆ 30 ರೂ. ಹಾಗೂ ಪೂರ್ತಿ ತಟ್ಟೆ ಅಚಾರಿ ಬಿರಿಯಾನಿಗೆ 50 ರೂ. ನಿಗದಿ ಮಾಡಲಾಗಿದೆ. ಸೋನಿಪತ್‌ನ ವಿಶೇಷವಾಗಿರುವ ಗ್ರೇವಿ ಚಾಪ್ ಬಿರಿಯಾನಿಗೆ 70 ರೂ. ಇದೆ. ಇಂಜಿನಿಯರ್ ಕೆಲಸ ಮಾಡುವಾಗ ಪ್ರತೀ ತಿಂಗಳು ಬ್ಯಾಂಕ್ ಖಾತೆಗೆ ಹಣ ಬಂದು ಬೀಳುತ್ತಿತ್ತು. ಆದರೆ ಇದರಲ್ಲಿ ಹಾಗಿಲ್ಲ. ಈಗಿನ್ನೂ ಆರಂಭವಾಗಿರುವ ನಮ್ಮ ಅಂಗಡಿಯಿಂದ ಲಾಭ, ನಷ್ಟ ಎರಡೂ ಆಗುತ್ತಿಲ್ಲ. ಆದರೆ ನಾವು ಐಟಿ ಕೆಲಸ ಮಾಡುವುದಕ್ಕಿಂತ ಈಗ ನೆಮ್ಮದಿಯಾಗಿದ್ದೇವೆ ಎನ್ನುತ್ತಾರೆ ಈ ಎಂಜಿನಿಯರ್ ಜೋಡಿ.