ನಿಶ್ಚಿತಾರ್ಥಕ್ಕೆ ಹಾಲ್ ಬುಕ್ ಮಾಡಿ ಬರುತ್ತಿದ್ದ ತಂದೆ -ಮಗಳಿಬ್ಬರೂ ಟ್ರಾನ್ಸ್ ಫರ್ ಸ್ಪೋಟಗೊಂಡು ಗಂಭೀರ ಗಾಯ!
Wednesday, March 23, 2022
ಬೆಂಗಳೂರು: ಈ ಒಂದು ದುರಂತ ಸಂಭವಿಸದಿದ್ದಲ್ಲಿ ಮುಂದಿನ ವಾರವೇ ಈ ಯುವತಿಗೆ ನಿಶ್ಚಿತಾರ್ಥ ನೆರವೇರುತ್ತಿತ್ತು. ಆದರೆ ರಸ್ತೆ ಸಂಚಾರದ ವೇಳೆ ಸಂಭವಿಸಿರುವ ಅದೊಂದು ಸ್ಫೋಟ ಆಕೆಯ ಸಂತೋಷಕ್ಕೆ ಬೆಂಕಿ ಇಟ್ಟಿದೆ. ಇದೀಗ ಬೆಂಕಿಯಲ್ಲಿ ಬೆಂದ ಗಾಯಗಳಿಂದ ತಂದೆ - ಮಗಳಿಬ್ಬರೂ ಜೀವನ್ಮರಣ ಸ್ಥಿತಿಯಲ್ಲಿ ಹೋರಾಟ ಮಾಡುವಂತಾಗಿದೆ.
ಶಿವರಾಜ್ ಹಾಗೂ ಅವರ ಪುತ್ರಿ ಚೈತನ್ಯ (18) ಇಬ್ಬರಿಗೂ ಬೆಂಕಿ ತಗುಲಿ ಗಂಭೀರವಾಗಿ ಗಾಯಗೊಂಡವರು.
ಇವರಿಬ್ಬರೂ ನಿಶ್ಚಿತಾರ್ಥಕ್ಕೆ ಹಾಲ್ ಬುಕ್ ಮಾಡಿ ಬರುತ್ತಿದ್ದರು. ದ್ವಿಚಕ್ರ ವಾಹನದಲ್ಲಿ ಬರುತ್ತಿದ್ದ ತಂದೆ - ಮಗಳಿಬ್ಬರೂ ಮಂಗನಹಳ್ಳಿ ಬಳಿ ಹಂಪ್ಸ್ ಹತ್ತಿರ ಬರುತ್ತಿದ್ದರು. ಆಗ ವಾಹನದ ವೇಗವನ್ನು ತಗ್ಗಿಸಿದ್ದಾರೆ. ಅದೇ ಸಂದರ್ಭದಲ್ಲೇ ಅಲ್ಲಿದ್ದ ಟ್ರಾನ್ಸ್ಫಾರ್ಮರ್ ಸ್ಫೋಟಗೊಂಡಿದೆ. ಪರಿಣಾಮ ಅದರಿಂದ ಬೆಂಕಿ ಸಿಡಿದಿದೆ. ಇದರಿಂದ ಇಬ್ಬರಿಗೂ ಬೆಂಕಿ ಹತ್ತಿಕೊಂಡಿದೆ.
ಇದೀಗ ಬೆಂಕಿ ಹತ್ತಿ ಗಂಭೀರ ಗಾಯಗೊಂಡ ಇವರನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಲ್ಯಾಣ ಮಂಟಪ ಬುಕ್ ಮಾಡಿ, ಒಂದಿಷ್ಟು ಬಟ್ಟೆ ಖರೀದಿಸಿಕೊಂಡು ಬರುತ್ತಿದ್ದಾಗಲೇ ಈ ದುರಂತ ಸಂಭವಿಸಿದೆ. ರಾಜಧಾನಿ ಬೆಂಗಳೂರಿನ ಜ್ಞಾನಭಾರತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ದುರಂತ ಸಂಭವಿಸಿದ್ದು, ಈ ಅವಘಡಕ್ಕೆ ಬೆಸ್ಕಾಂ ನಿರ್ಲಕ್ಷ್ಯವೇ ಕಾರಣ ಎಂದು ಆರೋಪಿಸಿರುವ ಸಂಬಂಧಿಕರು, ಬೆಸ್ಕಾಂ ವಿರುದ್ಧ ದೂರು ದಾಖಲಿಸಲು ಮುಂದಾಗಿದ್ದಾರೆ.