ವೀಡಿಯೋ ಕರೆ ಮಾಡಿ ಖಾಸಗಿ ದೃಶ್ಯ ಸೆರೆ: ಬೆಂಗಳೂರಿನ ಯುವತಿಗೆ ವಂಚನೆ, ಆರೋಪಿ ಸೆರೆ
Friday, April 1, 2022
ಬೆಂಗಳೂರು: ಡೇಟಿಂಗ್ ಆ್ಯಪ್ ಒಂದರಲ್ಲಿ ಪರಿಚಯವಾಗಿದ್ದ ಯುವತಿಯೋರ್ವಳ ಖಾಸಗಿ ವೀಡಿಯೋವನ್ನು ಇರಿಸಿಕೊಂಡು 3 ಲಕ್ಷ ರೂ.ಗೆ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದ ಆರೋಪಿಯನ್ನು ಕಾಡುಗೋಡಿ ಪೊಲೀಸರು ಬಂಧಿಸಿದ್ದಾರೆ.
ಕಾಡುಗೋಡಿ ನಿವಾಸಿ 35 ವರ್ಷದ ಮಹಿಳೆ ಕೊಟ್ಟ ದೂರಿನನ್ವಯ ತಮಿಳುನಾಡು ರಾಜ್ಯದ ಹೊಸೂರು ಮೂಲದ ಗಣೇಶ್ (25)ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
ಸಂತ್ರಸ್ತ ಯುವತಿಯು ಒಂದೂವರೆ ವರ್ಷದ ಹಿಂದೆ ಡೇಟಿಂಗ್ ಆ್ಯಪ್ ಒಂದರಲ್ಲಿ ಖಾತೆ ತೆರೆದಿದ್ದರು. ಅಲ್ಲಿ ಆರೋಪಿ ಗಣೇಶ್ ಪರಿಚಯವಾಗಿದ್ದ. ಬಳಿಕ ಇಬ್ಬರೂ ಸ್ನೇಹಿತರಾಗಿದ್ದರು. ಸಂತ್ರಸ್ತೆಯೊಂದಿಗೆ ಸಲಿಗೆ ಬೆಳೆಸಿಕೊಂಡಿದ್ದ ಆರೋಪಿ ಆಕೆಗೆ ವಾಟ್ಸ್‌ಆ್ಯಪ್ ಹಾಗೂ ವೀಡಿಯೋ ಕರೆಯನ್ನು ಮಾಡಿ ಮಾತನಾಡುತ್ತಿದ್ದ.
ಈ ವೇಳೆ ಯುವತಿಯೊಂದಿಗೆ ಆರೋಪಿ ಗಣೇಶ್ ಖಾಸಗಿಯಾಗಿ ವೀಡಿಯೋ ಕರೆಯಲ್ಲಿ ಮಾತನಾಡಿದ್ದ. ಈ ಸಂದರ್ಭದ ಖಾಸಗಿ ದೃಶ್ಯವನ್ನು ಆತ ರೆಕಾರ್ಡ್ ಮಾಡಿಕೊಂಡಿದ್ದಾನೆ. ಇದೀಗ 15 ದಿನಗಳಿಂದ ಆರೋಪಿ, ಸಂತ್ರಸ್ತೆಗೆ ವೀಡಿಯೋ ಕರೆಯ ಖಾಸಗಿ ದೃಶ್ಯವನ್ನು ಕಳುಹಿಸಿ 3 ಲಕ್ಷ ರೂ. ಕೊಡಬೇಕು. ಇಲ್ಲವಾದಲ್ಲಿ ಅದನ್ನು ಪತಿಗೆ ಕಳುಹಿಸುವುದಾಗಿ ಬ್ಲ್ಯಾಕ್‌ಮೇಲ್ ಮಾಡಿದ್ದಾನೆ. ಇದರಿಂದ ಗಾಬರಿಗೊಂಡ ಮಹಿಳೆ ಕಾಡುಗೋಡಿ ಠಾಣೆಯಲ್ಲಿ ದೂರು ನೀಡಿದ್ದರು. ಈ ಸಂಬಂಧ ಕಾರ್ಯಾಚರಣೆ ನಡೆಸಿರುವ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಈ ಬಗ್ಗೆ ಕಾಡುಗೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.