
ಸುತ್ತಲೂ ಬೇಟೆಗಾಗಿ ಹೊಂಚುಹಾಕುತ್ತಿರುವ ಕಾಡು ನಾಯಿಗಳ ಗುಂಪು: ಸಂಕಷ್ಟದಲ್ಲೂ ಜೀವ ಉಳಿಸಿಕೊಂಡ ಜಿಂಕೆಗಳ ಜಾಣ್ಮೆಯ ವೀಡಿಯೋ ವೈರಲ್
Thursday, March 3, 2022
ಬೆಂಗಳೂರು: ಯಾವತ್ತೂ ನಾವು ನಮ್ಮ ಶಕ್ತಿಯನ್ನು ಎಂಬುದಕ್ಕಿಂತ ಬುದ್ಧಿಶಕ್ತಿಯನ್ನು ನಂಬುವುದು ಒಳಿತು. ಅದು ಯಾವತ್ತೂ ದಿಟವೇ. ನಾವು ಸಮಯೋಚಿತವಾಗಿ ಚಿಂತನೆ ನಡೆಸಿ ಹೆಜ್ಜೆ ಇಟ್ಟಲ್ಲಿ ಎಂತಹ ಕ್ಲಿಷ್ಟ ಸಂಕಷ್ಟವನ್ನೂ ಎದುರಿಸಲು ಸಾಧ್ಯ. ಧೈರ್ಯದೊಂದಿಗೆ ನಮ್ಮಲ್ಲಿರುವ ಆತ್ಮವಿಶ್ವಾಸ, ದೃಢ ನಂಬಿಕೆ ಮತ್ತು ಸಮಯಪ್ರಜ್ಞೆ ನಮ್ಮ ಬದುಕಿಗೊಂದು ಶಕ್ತಿ ತರುತ್ತದೆ. ಅದಕ್ಕೆ ಈ ವಿಡಿಯೋವೇ ಸಾಕ್ಷಿ. ಈ ಜಿಂಕೆಗಳು ಧೈರ್ಯದೊಂದಿಗೆ ತೋರಿದ ಸಮಯಪ್ರಜ್ಞೆ ನಿಜಕ್ಕೂ ಅದ್ಭುತ.
ಸಾವು ತನ್ನೆದುರಿಗೆ ಇದ್ದರೂ ಈ ಜಿಂಕೆಗಳು ತಮ್ಮ ಜೀವ ಉಳಿಸಿಕೊಂಡ ಪರಿಯಂತೂ ವೀಡಿಯೋ ನೋಡಿದ ಎಲ್ಲರನ್ನೂ ಬೆರಗುಗೊಳಿಸುತ್ತದೆ. ಯಾವುದೇ ರೀತಿಯ ಹೋರಾಟವನ್ನು ನಡೆಸದೆ ನಿಂತಲ್ಲೇ ಸ್ತಬ್ಧವಾಗಿ ನಿಂತು ಬೇಟೆಗಾಗಿ ಹೊಂಚು ಹಾಕುತ್ತಿದ್ದ ಪ್ರಾಣಿಗಳೇ ಕೈಸೋತು ಹೋಗುವಂತೆ ಮಾಡಿದೆ ಈ ಮೂರು ಜಿಂಕೆಗಳು.
ಭಾರತೀಯ ಅರಣ್ಯ ಸೇವೆಗಳ ಅಧಿಕಾರಿ ಸುಸಂತ ನಂದ ಈ ವೀಡಿಯೋವನ್ನು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಕಾಡಿನ ಶ್ವಾನ (ವೈಲ್ಡ್ ಡಾಗ್)ಗಳ ಹಿಂಡೊಂದರಿಂದ ಜಿಂಕೆಗಳು ತಮ್ಮನ್ನು ತಾವು ರಕ್ಷಿಸಿಕೊಳ್ಳುವ ದೃಶ್ಯ ಇದು. ಬಂಡೆಯ ಸುತ್ತ ಹಸಿದ ಕಾಡು ಶ್ವಾನಗಳು ಹಿಂಡೊಂದು ಜಿಂಕೆಗಳನ್ನು ಸುತ್ತುವರಿದಿರಿವ ಮೂಲಕ 41 ಸೆಕೆಂಡುಗಳ ಈ ವೀಡಿಯೋ ಶುರುವಾಗುತ್ತದೆ. ಮೂರು ಜಿಂಕೆಗಳನ್ನು ಬೇಟೆಯಾಡಲೆಂದೇ ಈ ಕಾಡಿನ ಶ್ವಾನಗಳು ಇಲ್ಲಿ ಸುತ್ತುವರಿದಿದ್ದವು. ಆದರೆ, ಜಾಣ ಜಿಂಕೆಗಳು ಈ ಬೇಟೆಗಾರರ ತಂಡಕ್ಕೇ ಶಾಕ್ ಕೊಟ್ಟಿದೆ.
ಬಂಡೆಯ ತುದಿಯಲ್ಲಿ ತಮ್ಮ ಸಮತೋಲನ ಕಾಯ್ದುಕೊಂಡು ನಿಂತ ಮೂರು ಜಿಂಕೆಗಳು ಕಾಡು ಶ್ವಾನಗಳ ಕೈಗೆ ಸಿಗದೆ ತಪ್ಪಿಸಿಕೊಂಡಿದೆ. ಆದರೂ ಒಂದಷ್ಟು ಕಾಡು ಶ್ವಾನಗಳು ಬಂಡೆಯ ತುದಿಗೆ ಹೋಗುವ ಪ್ರಯತ್ನ ಮಾಡಿದವಾದರೂ ಅವುಗಳಿಗೆ ಜಿಂಕೆಯನ್ನು ಬೇಟೆಯಾಡಲು ಸಾಧ್ಯವಾಗಿರಲಿಲ್ಲ. ಈ ಬೇಟೆಗಾರ ಶ್ವಾನಗಳ ಸಾಮರ್ಥ್ಯ ಹಾಗೂ ಬಲಹೀನತೆಯ ಬಗ್ಗೆ ಅರಿವಿದ್ದ ಜಿಂಕೆಗಳು ಧೈರ್ಯದಿಂದ ಒಂದುಚೂರು ಕದಲದೆ ಅಲ್ಲೇ ನಿಂತಿದ್ದವು. ಆದರೆ, ಈ ಬೇಟೆಗಾರ ಪ್ರಾಣಿಗಳು ಮಾತ್ರ ಶಿಕಾರಿ ಎದುರಿಗಿದ್ದರೂ ಹಿಡಿಯಲಾಗದೆ ಚಡಪಡಿಸುತ್ತಿದ್ದವು.
ಈ ಕಾಡು ಶ್ವಾನಗಳು ಜಾಸ್ತಿಯಾಗಿ ಆಫ್ರಿಕಾದಲ್ಲಿ ಕಾಣಸಿಗುತ್ತವೆ. ಇವುಗಳನ್ನು ಆಫ್ರಿಕನ್ ಬೇಟೆ ಶ್ವಾನ ಎಂದೂ ಕರೆಯುಲಾಗುತ್ತದೆ. ಸಹಜವಾಗಿಯೇ ಈ ವಿಡಿಯೋ ಈಗ ನೆಟ್ಟಿಗರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ. ಸಾಕಷ್ಟು ಮಂದಿ ಬಲು ಕುತೂಹಲದಿಂದಲೇ ಈ ದೃಶ್ಯವನ್ನು ನೋಡುತ್ತಿದ್ದಾರೆ. ಜಿಂಕೆಗಳ ಸಾಮರ್ಥ್ಯ ಎಲ್ಲರನ್ನೂ ಬೆರಗುಗೊಳಿಸಿದೆ. ಹೀಗಾಗಿ, ಈ ವಿಡಿಯೋ ಸಾಕಷ್ಟು ವೀಕ್ಷಣೆ ಮತ್ತು ಅಚ್ಚರಿ, ಕುತೂಹಲಕ್ಕೂ ಕಾರಣವಾಗಿದೆ.