ಪೋಲ್ಯಾಂಡ್ ದೇಶದ ಕರೋಲಿನಾಗೆ ವಿಶ್ವಸುಂದರಿ ಪಟ್ಟ, ಭಾರತೀಯ ಮೂಲದ ಶ್ರೀ ಸೈನಿ ರನ್ನರ್ ಅಪ್
Thursday, March 17, 2022
ಪೋರ್ಟ್ ರಿಕೋ: 2021ರ ವಿಶ್ವಸುಂದರಿ ಪಟ್ಟವನ್ನು ಪೋಲ್ಯಾಂಡ್ ನ ಕರೋಲಿನಾ ಬಿಲಾವಸ್ಕ್ ಅಲಂಕರಿಸಿದ್ದಾರೆ. ಪೋರ್ಟೊ ರಿಕೋದಲ್ಲಿ ಶುಕ್ರವಾರ ನಡೆದಿರುವ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ 2019ನೇ ಸಾಲಿನ ವಿಶ್ವಸುಂದರಿ ಜಮೈಕಾದ ಟೋನಿ ಆ್ಯನ್ ಸಿಂಗ್ ಪೋಲ್ಯಾಂಡ್ ನ ಕರೋಲಿನಾ ಬಿಲಾವಸ್ಕ್ ಗೆ ಕಿರೀಟ ತೊಡಿಸಿದ್ದಾರೆ.
ಈ ವಿಶ್ವಸುಂದರಿ ಸ್ಪರ್ಧೆಯಲ್ಲಿ ಭಾರತೀಯ ಮೂಲದ ಅಮೆರಿಕಾ ಪ್ರಜೆ ಶ್ರೀ ಸೈನಿ ಮೊದಲ ರನ್ನರ್ ಅಪ್ ಆಗಿ ಹೊರಹೊಮ್ಮಿದ್ದಾರೆ. ಕೋಟ್ ಡಿ ಐವರಿಯ ಒಲಿವಿಯಾ ಯೇಸ್ ಎರಡನೇ ರನ್ನರ್ ಅಪ್ ಪ್ರಶಸ್ತಿಗೆ ಭಾಜನರಾಗಿರುವುದಾಗಿ ವರದಿ ತಿಳಿಸಿದೆ.
ಮಿಸ್ ವರ್ಲ್ಡ್ ಟ್ವೀಟರ್ ಖಾತೆಯಲ್ಲಿ ಈ ಸುದ್ದಿಯನ್ನು ಅಧಿಕೃತವಾಗಿ ಘೋಷಣೆ ಮಾಡಲಾಗಿದೆ. ಈ ನಡುವೆ ಭಾರತವನ್ನು ಪ್ರತಿನಿಧಿಸಿದ್ದ ಮಾನಸ ವಾರಣಾಸಿ ಟಾಪ್ 13ರಲ್ಲಿ ಸ್ಥಾನ ಪಡೆದಿದ್ದು, ಭಾರತದ ಮಾನುಶಿ ಚಿಲ್ಲರ್ 2017ರ ವಿಶ್ವಸುಂದರಿ ಕಿರೀಟವನ್ನು ತಮ್ಮದಾಗಿಸಿಕೊಂಡಿದ್ದರು. ವಿಶ್ವಸುಂದರಿ ಸ್ಪರ್ಧೆಯನ್ನು 2021ರ ಡಿಸೆಂಬರ್ ನಲ್ಲಿ ನಡೆಸಲು ನಿರ್ಧರಿಸಲಾಗಿತ್ತು. ಆದರೆ ಭಾರತದ ಮಾನಸ ವಾರಣಾಸಿ ಸೇರಿದಂತೆ ಹಲವಾರು ಸ್ಪರ್ಧಿಗಳು ಕೋವಿಡ್ ದೃಢಪಟ್ಟಿದ್ದರಿಂದ ಸ್ಪರ್ಧೆಯನ್ನು ಮುಂದೂಡಲಾಗಿತ್ತು.
ಶ್ರೀ ಸೈನಿ 1996ರ ಜ.6ರಂದು ಪಂಜಾಬ್ ನ ಲುಧಿಯಾನಾದಲ್ಲಿ ಜನಿಸಿದ್ದರು. ಬಳಿಕ ಆಕೆ ತನ್ನ 5ನೇ ವಯಸ್ಸಿನಿಂದಲೇ ಅಮೆರಿಕಾದಲ್ಲಿ ವಾಸ್ತವ್ಯವಿದ್ದರು. ಎಳೆಯ ವಯಸ್ಸಿನಲ್ಲಿ ಬಡತನವನ್ನು ಅನುಭವಿಸಿದ್ದ ಸೈನಿ, ಅಂದಿನಿಂದ ಪ್ರತಿಯೊಬ್ಬರೂ ತಮ್ಮಿಂದಾದ ಸಹಾಯವನ್ನು ಸಮಾಜಕ್ಕೆ ನೀಡುವ ಹೊಣೆಗಾರಿಕೆ ಹೊರಬೇಕು ಎಂದು ಪ್ರತಿಪಾದಿಸುತ್ತಿರುವುದಾಗಿ ವರದಿ ತಿಳಿಸಿದೆ.
ಅಮೆರಿಕಾದ ಮೊಸೆಸ್ ಲೇಕ್ ಬಳಿ ನಡೆದಿರುವ ಭೀಕರ ಕಾರು ಅಪಘಾತವೊಂದರಲ್ಲಿ ಶ್ರೀ ಸೈನಿಯ ಮುಖ ಸುಟ್ಟು ಹೋಗಿತ್ತು. ಅಷ್ಟೇ ಅಲ್ಲದೇ ಸೈನಿಯ ಹೃದಯ ಬಡಿತ ಕೇವಲ ನಿಮಿಷಕ್ಕೆ 20ರಷ್ಟಿತ್ತು. ಈ ಸಂದರ್ಭ ವೈದ್ಯರು ನೀನು ಇನ್ನು ಮುಂದೆ ನೃತ್ಯ ಮಾಡಲು ಸಾಧ್ಯವಿಲ್ಲ ಎಂದು ಹೇಳಿಬಿಟ್ಟಿದ್ದರು. ಹಾಗೂ ಸುಟ್ಟು ಹೋದ ಮುಖ ಗುಣಮುಖವಾಗಿ, ಮೊದಲಿನಂತಾಗಲು ಒಂದು ವರ್ಷ ಬೇಕು ಎಂದಿದ್ದರು. ಆದರೆ ಇದ್ಯಾವುದನ್ನು ಗಣನೆಗೆ ತೆಗೆದುಕೊಳ್ಳದ ಸೈನಿ ವಾರಗಳ ಬಳಿಕ ಡ್ಯಾನ್ಸ್ ತರಗತಿಗೆ ಹಾಜರಾಗಿದ್ದರು. ಸೈನಿ ಮಿಸ್ ವರ್ಲ್ಡ್ ಅಮೆರಿಕ ಸೇರಿದಂತೆ ಹಲವಾರು ಪ್ರಶಸ್ತಿಗಳನ್ನು ಗೆದ್ದಿದ್ದಾರೆ.