ರಥೋತ್ಸವದ ಸಂದರ್ಭ ತೇರಿಗೆ ಹೈವೋಲ್ಟೇಜ್ ವಿದ್ಯುತ್ ತಂತಿ ಸ್ಪರ್ಶ: 10 ಮಂದಿ ಭಕ್ತರು ಸ್ಥಳದಲ್ಲಿಯೇ ಮೃತ್ಯು
Wednesday, April 27, 2022
ತಂಜಾವೂರು: ರಥೋತ್ಸವದ ಸಂದರ್ಭ ತೇರಿಗೆ ಹೈವೋಲ್ಟೇಜ್ ವಿದ್ಯುತ್ ತಂತಿ ಸ್ಪರ್ಶಗೊಂಡ ಪರಿಣಾಮ 10 ಮಂದಿ ಭಕ್ತಾದಿಗಳು ಸ್ಥಳದಲ್ಲೇ ಮೃತಪಟ್ಟು, ಹಲವರು ಗಂಭೀರವಾಗಿ ಗಾಯಗೊಂಡಿರುವ ದುರ್ಘಟನೆಯೊಂದು ತಮಿಳುನಾಡಿನ ಕಾಳಿಮೇಡು ಗ್ರಾಮದಲ್ಲಿ ನಡೆದಿದೆ.
ರಥೋತ್ಸವ ನಡೆದು ತೇರನ್ನು ಮತ್ತೆ ವಾಪಸ್ ಎಳೆಯುತ್ತಿದ್ದ ಸಂದರ್ಭ ಆಕಸ್ಮಿಕವಾಗಿ ಹೈವೋಲ್ಟೇಜ್ ವಿದ್ಯುತ್ ತಂತಿ ರಥಕ್ಕೆ ಸ್ಪರ್ಶಿಸಿದೆ. ಪರಿಣಾಮ ಹತ್ತು ಮಂದಿ ಭಕ್ತರು ಸಾವನ್ನಪ್ಪಿದ್ದಾರೆ. ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ. ರಥ ಬೆಂಕಿ ತಗುಲಿ ಸುಟ್ಟು ಕರಕಲಾಗಿದೆ.
ಮಾಹಿತಿ ತಿಳಿಯುತ್ತಿದ್ದಂತೆ ಪೊಲೀಸರು ಮತ್ತು ಅಗ್ನಿಶಾಮಕ ದಳ ಸ್ಥಳಕ್ಕೆ ದೌಡಾಯಿಸಿ ರಕ್ಷಣಾ ಕಾರ್ಯ ಕೈಗೊಂಡಿದ್ದಾರೆ. ಗಾಯಾಳುಗಳನ್ನು ಸ್ಥಳೀಯರ ನೆರವಿನಿಂದ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೃತದೇಹಗಳನ್ನು ಪೊಲೀಸರು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ.
ಈ ಘಟನೆಯಿಂದಾಗಿ ಗ್ರಾಮದಲ್ಲಿ ನೀರವ ಮೌನ ಆವರಿಸಿದೆ. ಪೊಲೀಸರು ಘಟನೆ ಬಗ್ಗೆ ತನಿಖೆ ಕೈಗೊಂಡಿದ್ದು, ಈ ಕುರಿತು ಇನ್ನಷ್ಟು ಮಾಹಿತಿ ತಿಳಿದು ಬರಬೇಕಾಗಿದೆ.