ಮಂಗಳೂರಿನಲ್ಲೂ ಬಿಸಿ ಮುಟ್ಟಿದ ಶಬ್ದಮಾಲಿನ್ಯ ವಿವಾದ: 1001 ಧಾರ್ಮಿಕ, ಖಾಸಗಿ ಕೇಂದ್ರಗಳಿಗೆ ನೊಟೀಸ್ ಜಾರಿ
Wednesday, April 6, 2022
ಮಂಗಳೂರು: ಮಂಗಳೂರಿನಲ್ಲೂ ಶಬ್ದಮಾಲಿನ್ಯ ವಿವಾದದ ಬಿಸಿ ಮುಟ್ಟಿದ್ದು, ಮಂಗಳೂರು ಪೊಲೀಸ್ ಆಯುಕ್ತಾಲಯ 1001 ಧಾರ್ಮಿಕ, ಖಾಸಗಿ ಕೇಂದ್ರಗಳಿಗೆ ನೊಟೀಸ್ ಜಾರಿ ಮಾಡಿದೆ.
1986ರ ಕಾಯ್ದೆಯ ಅನ್ವಯ ಸಾರ್ವಜನಿಕ ಸ್ಥಳಗಳಲ್ಲಿ ನಿಗದಿತ ಡೆಸಿಬಲ್ ಗಳಿಗಿಂತ ಹೆಚ್ಚಿನ ಶಬ್ದಮಾಲಿನ್ಯ ಉಂಟು ಮಾಡಬಾರದೆನ್ನುವ ನಿಯಮವಿದೆ. ಈ ಹಿನ್ನೆಲೆಯಲ್ಲಿ ಮಂಗಳೂರು ಪೊಲೀಸ್ ಆಯುಕ್ತಾಲಯ ಪರಿಸರ ಅರಣ್ಯ ಸಚಿವಾಲಯದ ನಿರ್ದೇಶನದಂತೆ ಸಾರ್ವಜನಿಕ ಸ್ಥಳಗಳಲ್ಲಿ 1986ರ ಕಾಯ್ದೆಯ ಅನ್ವಯ ನಿಗದಿತ ಡೆಸಿಬಲ್ ಗಳಿಗಿಂತ ಹೆಚ್ಚಿನ ಶಬ್ದ ಉಂಟು ಮಾಡುವ 1001 ಧಾರ್ಮಿಕ ಮತ್ತು ಖಾಸಗಿ ಸ್ಥಳಗಳಿಗೆ ನೊಟೀಸ್ ಜಾರಿ ಮಾಡಿದೆ.
ನಾಲ್ಕು ವಿಭಾಗಗಳಲ್ಲಿ ನಿಯಮ ಉಲ್ಲಂಘಿಸಬಾರದೆಂದು ನೊಟೀಸ್ ಜಾರಿ ಮಾಡಲಾಗಿದೆ. ಇಂಡಸ್ಟ್ರಿಯಲ್ ಏರಿಯಾ, ಕಮರ್ಷಿಯಲ್ ಏರಿಯಾ, ರೆಸಿಡೆನ್ಷಿಯಲ್ ಏರಿಯಾ ಹಾಗೂ ಸೈಲೆನ್ಸ್ ಝೋನ್ ಎಂದು ವಿಭಾಗಿಸಿ ನೊಟೀಸ್ ಜಾರಿ ಮಾಡಲಾಗಿದೆ. 357 ದೇವಸ್ಥಾನಗಳು, 168 ಮಸೀದಿಗಳು, 95 ಚರ್ಚ್ ಗಳು, ಜೊತೆಗೆ 106 ಶಿಕ್ಷಣ ಸಂಸ್ಥೆಗಳು, 60 ಕೈಗಾರಿಕಾ ಸ್ಥಳಗಳು, 98 ಮನೋರಂಜನಾ ಸ್ಥಳಗಳು, 68 ಮದುವೆ, ಕಾರ್ಯಕ್ರಮ ಹಾಲ್ ಗಳು, 49 ಸಾರ್ವಜನಿಕ ಸ್ಥಳಗಳಿಗೂ ನೊಟೀಸ್ ಜಾರಿ ಮಾಡಲಾಗಿದೆ.
ಮಂಗಳೂರು ಪೊಲೀಸ್ ಕಮಿಷನರ್ ಎನ್.ಶಶಿಕುಮಾರ್ ಮಾತನಾಡಿ, ಮಸೀದಿ ಆಜಾನ್ ಅನ್ನು ಗುರಿಯಾಗಿಸಿಕೊಂಡು ಈ ನೊಟೀಸ್ ಜಾರಿಯಾಗಿಲ್ಲ. ಈ ಬಗ್ಗೆ ಗೊಂದಲಕ್ಕೊಳಗಾಗುವ ಅಗತ್ಯವಿಲ್ಲ. ಯಾವುದೇ ನಿರ್ದಿಷ್ಟ ಸಮುದಾಯವನ್ನು ಗುರಿಯಾಗಿಸಿಕೊಂಡು ಈ ನೊಟೀಸ್ ಜಾರಿಯಾಗಿಲ್ಲ ಎಂದರು.